

ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಪಿಡುಗಾದ ಮದ್ಯಪಾನ, ಇತರ ದುಶ್ಚಟಕ್ಕೆ ಯುವ ಜನತೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಜುಲೈ 14 ರಿಂದ 23ರವರೆಗೆ ಆಯೋಜಿಸಿದ್ದ 21ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಕರೋನಾ ಸಂದರ್ಭದಲ್ಲಿ ಗಂಡುಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಮದ್ಯದಂಗಡಿ ಮುಂದೆ ಸರದಿಯಲ್ಲಿ ನಿಂತಿದ್ದು, ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮಂಡ್ಯದಲ್ಲಿ ಕಳ್ಳಭಟ್ಟಿ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಮಹಿಳೆಯೂ ಇದ್ದರು. ದುಶ್ಚಟಕ್ಕೆ ಒಳಗಾದವರು ಸಮಾಜದಲ್ಲಿ ತಮ್ಮ ಗೌರವ ಕಳೆದುಕೊಳ್ಳುವ ಜತೆಗೆ ಕುಟುಂಬದವರ ಮರ್ಯಾದೆಯನ್ನೂ ಹಾಳುಮಾಡುತ್ತಾರೆ. ಆರೋಗ್ಯವಂತ ಸಮಾಜಕ್ಕೆ ಆರೋಗ್ಯವಂತ ವ್ಯಕ್ತಿಗಳ ಅಗತ್ಯವಿದ್ದು ದುಶ್ಚಟಗಳಿಂದ ದೂರವಿರಬೇಕು. ಸುತ್ತೂರು ಸಂಸ್ಥೆಯು ಶಿಬಿರಗಳನ್ನು ನಡೆಸುತ್ತಿದ್ದು, ಶೇ.30ರಿಂದ 40 ರಷ್ಟು ಜನರಲ್ಲಿ ಸುಧಾರಣೆ ಸಾಧ್ಯವಾಗಿದೆ. ಪಟ್ಟಣದಲ್ಲಿ ಇದು ಮೂರನೇ ಶಿಬಿರವಾಗಿದ್ದು, ಈಗಾಗಲೇ ಇಂತಹ ಶಿಬಿರಗಳಲ್ಲಿ 1,136 ವ್ಯಸನಿಗಳು ಮದ್ಯಪಾನದ ದುಶ್ಚಟಗಳಿಂದ ಹೊರಬಂದು ಕುಟುಂಬದವರೊಂದಿಗೆ ಉತ್ತಮ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ನಮ್ಮ ಸಂಸ್ಕೃತಿ ಕಾಪಾಡಲು ಎಲ್ಲರೂ ದುಶ್ಚ್ಚಟಗಳಿಂದ ದೂರವಿರಬೇಕು ಎಂದು ಹೇಳಿದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಹಾಲಹಳ್ಳಿಯ ಸಂಗಮ ಪ್ರತಿಷ್ಠಾನ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು, ಜೆಎಸ್‌ಎಸ್ ಸಂಸ್ಥೆ ಆಯೋಜಿಸುವ ಮದ್ಯವರ್ಜನ ಶಿಬಿರಕ್ಕೆ ನೆರವಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಿದೆ. ಈ ಬಗ್ಗೆ ಸಮಾಜ ಸಹ ಕಾಳಜಿ ತೋರಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಮದ್ಯವ್ಯಸನಿಗಳು ಚಟ ಮತ್ತು ವ್ಯಸನಗಳಿಂದ ಹೊರಬರಲು ಗಟ್ಟಿಮನಸ್ಸು ಮಾಡಬೇಕು. ಶಿಬಿರಾರ್ಥಿಗಳು ಇಲ್ಲಿನ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ವ್ಯಸನಮುಕ್ತರಾಗಿರುವುದು ಕಂಡುಬರುತ್ತಿದೆ. ಹೊಸ ಜೀವನ ನಡೆಸಲು ನೆರವಾಗುತ್ತದೆ. ಇದು ಸಮಾಜದ ಬಗ್ಗೆ ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಮೈಸೂರಿನ ಪರಂಪರೆ ಸಂಸ್ಥೆಯ ಮುಖ್ಯಸ್ಥ ಪಿ.ಕೃಷ್ಣಕುಮಾರ್ ಮಾತನಾಡಿ, ಕುಡಿತಕ್ಕೆ ನಾನಾ ನೆಪಗಳು ಸಿಕ್ಕುತ್ತವೆ. ನಾನು 41 ವರ್ಷದ ಹಿಂದೆಯೇ ವ್ಯಸನಮುಕ್ತನಾಗಿದ್ದು, ಪ್ರತಿ ವ್ಯಸನಿಯೂ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ವ್ಯಸನಗಳಿಂದ ದೂರವಿರಬೇಕು. ಕುಡಿತದಿಂದ ದೂರವಿದ್ದ ಪ್ರತಿ ವರ್ಷವೂ ಅವರ ಹುಟ್ಟುಹಬ್ಬವಿದ್ದಂತೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡಿದ್ದ 28 ಜನರಿಗೆ ಹೆಂಡತಿ ಮಕ್ಕಳ ಜತೆ ನೆಮ್ಮದಿಯಾಗಿರುವ ಪ್ರತಿಜ್ಞಾವಿಧಿ ಬೋಧಿಸಲಾಯಿತು.