

ರಾಮನಗರ: ಹಣಕ್ಕಾಗಿ ಮಗುವನ್ನು ಅಪಹರಿಸಿದ್ದ ಯುವಕನೊಬ್ಬ ಪೊಲೀಸರ ಅತಿಥಿಯಾಗಿರುವ ಟನೆ ಮಂಜುನಾಥ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹಣದ ಆಸೆಗಾಗಿ ಮಗುವನ್ನು ಅಪಹರಿಸಿದ್ದ ಮಂಜುನಾಥ ನಗರದ ದರ್ಶನ್ (20) ಬಂಧಿತ.
ನಗರದ ಮಂಜುನಾಥ ನಗರ ನಿವಾಸಿಯೊಬ್ಬರ 5 ವರ್ಷದ ಹೆಣ್ಣು ಮಗು ಮನೆಯಿಂದ ಸಂಜೆ 7.30ರ ವೇಳೆಗೆ ಕಾಣೆ ಆಗುತ್ತಾಳೆ. ಇದರಿಂದ ಗಾಬರಿಗೊಂಡ ಮಗುವಿನ ಪಾಲಕರು ಸುಮಾರು ಅರ್ಧ ಗಂಟೆಗಳ ಕಾಲ ಹುಡುಕಾಟ ನಡೆಸುತ್ತಾರೆ. ನಂತರ ಮಗುವಿನ ತಂದೆ ತನ್ನಿಬ್ಬರು ಸ್ನೇಹಿತರಿಗೆ ಮಾಹಿತಿ ನೀಡಿ ಮತ್ತೆ ಹುಡುಕಾಟ ನಡೆಸುತ್ತಾರೆ. ಆದರೆ ಮಗು ಪತ್ತೆ ಆಗುವುದೇ ಇಲ್ಲ.
ಮಗು ನಾಪತ್ತೆ ಆಗಿರುವ ಆತಂಕದಲ್ಲಿದ್ದ ಮಗುವಿನ ತಂದೆ ಮೊಬೈಲ್ ಸಂಖ್ಯೆಗೆ ಅಪರಿಚಿತ ನಂಬರ್ನಿಂದ ಕರೆಯೊಂದು ಬರುತ್ತದೆ. ಭಾನುವಾರ ರಾತ್ರಿ 9.18ವರೆಗೂ ನಾಲ್ಕು ಬಾರಿ ಕರೆ ಮಾಡಿ, ನಿನ್ನ ಮಗು ನನ್ನ ಬಳಿ ಇದೆ. ನನಗೆ 2 ಲಕ್ಷ ರೂ. ಹಣ ಕೊಡಬೇಕು, ಹಣ ಕೊಡಿದ್ದರೆ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕಿ ಕರೆಯನ್ನು ಕಡಿತಗೊಳಿಸುತ್ತಾನೆ. ಇದರಿಂದ ತೀವ್ರವಾಗಿ ಗಾಬರಿಗೊಂಡ ಮಗುವಿನ ತಂದೆ, ಮಗುವಿಗಾಗಿ ಹುಡುಕಾಟವನ್ನು ನಿಲ್ಲಿಸುವುದಿಲ್ಲ.
ನಂತರ ರಾತ್ರಿ 9.45ರ ಸುಮಾರಿಗೆ ಬೋಳಪ್ಪನ ಕರೆ ಸಮೀಪದ ಶನಿಮಹಾತ್ಮ ದೇವಸ್ಥಾನದ ಬಳಿಯ ಸಿಮೆಂಟ್ ಅಂಗಡಿ ಬಳಿ ತೆರಳಿ ಪರಿಶೀಲನೆ ನಡೆಸಿದಾಗ ಬಾಯಿ, ಮೈ ಕೈಗೆ ಗಮ್ ಟೇಪ್ ಸುತ್ತಿದ್ದ ಮಗು ಪತ್ತೆ ಆಗುತ್ತದೆ.
ಮಗು ಸಿಕ್ಕ ನಂತರ ಸುಮ್ಮನಾಗದ ಸ್ಥಳಿಯ ಯುವಕರ ತಂಡ ಸ್ಥಳದಲ್ಲಿಯೇ ಹುಡುಕಾಟ ನಡೆಸುತ್ತಾರೆ. ಈ ವೇಳೆ ಅಲ್ಲಿಯೇ ಸಿಕ್ಕಿ ಬೀಳುವ ಆತಂಕದಲ್ಲಿ ಅವಿತುಕೊಂಡಿದ್ದ ದರ್ಶನ್ ಸಿಕ್ಕಿ ಬೀಳುತ್ತಾನೆ. ಈ ವೇಳೆ ಮಗುವನ್ನು ಅಪಹರಿಸಿದ್ದು ನಾನೇ, ನನಗೆ 2 ಲಕ್ಷ ರೂ ಹಣದ ಅಗತ್ಯವಿತ್ತು ಎನ್ನುವ ಮಾಹಿತಿಯನ್ನು ನೀಡಿದ್ದಾನೆ. ನಂತರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಸೋಮವಾರ ಆತನನ್ನು ಕೋರ್ಟ್ಗೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.