ಸ್ನೇಹಿತರಿಂದಲೇ ಯುವಕನ ಹತ್ಯೆ

Published on

ಹಾಸನ: ಮೊಬೈಲ್ ಅಡ ಇಟ್ಟ ವಿಷಯಕ್ಕೆ ಹಲ್ಲೆ ಮಾಡಿದ ಸಣ್ಣ ವಿಷಯಕ್ಕೆ ಮಂಗಳವಾರ ಸ್ನೇಹಿತನನ್ನೇ ಕೊಲೆಗೈದಿರುವ ಐವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಯರೇಹಳ್ಳಿ ಬಳಿ ದೇವರಾಯಪಟ್ಟಣದ ಅಂಕಿತ್ (21) ಕೊಲೆಯಾದ ಯುವಕ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಮೊಹಮದ್ ಸುಜೀತಾ ಹಂತಕರನ್ನು ಬಂಧಿಸಲು, 2 ತನಿಖಾ ತಂಡಗಳನ್ನು ರಚನೆ ಮಾಡಿದ್ದರು.

ಬಂಧಿತ ಇವರಲ್ಲಿ ಮೂವರು ಬಾಲಾಪರಾಧಿಗಳು ಎಂದು ತಿಳಿದು ಬಂದಿದ್ದು, ಎಲ್ಲರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ದೇವರಾಯಪಟ್ಟಣದ ಅಂಕಿತ್‌ನನ್ನು ಈತ ಸ್ನೇಹಿತರೇ ಕ್ಲುಲ್ಲಕ ಕಾರಣಕ್ಕೆ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದರು. ಅಂಕಿತ್ ತಂದೆ ಚಂದ್ರ ಅವರು ನಂದ ಹಾಗೂ ಕೆಂಪ ಎಂಬುವವರ ವಿರುದ್ಧ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.

ಅಂಕಿತ್ ವಾರ್ಡ್ ರೂಂನ ಹೆಲ್ಪರ್‌ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ದೊಡ್ಡ ಸ್ನೇಹ ಬಳಗವಿತ್ತು. ಅಂಕಿತ್‌ನ ಸ್ನೇಹಿತ ಹರ್ಷ ಎಂಬಾತನ ಮೊಬೈಲ್‌ನ್ನು ನಂದ ಹಾಗೂ ಕೆಂಪ ಎಂಬುವರು ಅಡ ಇಟ್ಟು ಹಣ ಪಡೆದಿದ್ದರು.

ಮಂಗಳವಾರ ಮಧ್ಯಾಹ್ನ ನಗರದ ತಣ್ಣೀರುಹಳ್ಳದ ವೈನ್ಸ್‌ವೊಂದರ ಬಳಿ ನಂದ ಹಾಗೂ ಕೆಂಪ ಇಬ್ಬರು ಅಂಕಿತ್ ಕಣ್ಣಿಗೆ ಬಿದ್ದರು. ಆಗ ಹರ್ಷನ ಮೊಬೈಲನ್ನು ಏಕೆ ಕಿತ್ತುಕೊಂಡಿದ್ದೀರಾ ಎಂದು ಅಂಕಿತ್ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ನಂದ ಹಾಗೂ ಕೆಂಪನಿಗೆ 3-4 ಏಟು ಸಹ ಹೊಡೆದಿದ್ದಾನೆ. ನಂತರ ಸ್ಥಳದಲ್ಲಿದ್ದವರು ಸಮಾಧಾನಪಡಿಸಿದ್ದರಿಂದ ಎಲ್ಲರೂ ಅಲ್ಲಿಂದ ತೆರಳಿದ್ದರು.

ಇತ್ತ ಅಂಕಿತ್ ಮನೆಯಲ್ಲಿ ಗೌರಿ-ಗಣೇಶ ಹಬ್ಬಕ್ಕೆಂದು ಸಿದ್ಧತೆ ನಡೆಯುತ್ತಿತ್ತು. ಮಧ್ಯಾಹ್ನವೇ ಮನೆಗೆ ಬಂದ ಅಂಕಿತ್, ಸಂಜೆ 6 ಗಂಟೆ ವರೆಗೆ ಮನೆಯಲ್ಲಿ ಮಲಗಿದ್ದ. ಸ್ನೇಹಿತರು ನಿರಂತರವಾಗಿ ಕರೆ ಮಾಡುತ್ತಿದ್ದುದರಿಂದ ಗುಡ್ಡೇನಹಳ್ಳಿಯಲ್ಲಿ ಗಣಪತಿ ಕೂರಿಸುತ್ತಿದ್ದು, ಅಲ್ಲಿಗೆ ಹೋಗಿ ರಾತ್ರಿ 8 ಗಂಟೆಯೊಳಗೆ ಬರುತ್ತೇನೆ ಎಂದು ಅಮ್ಮನಿಗೆ ಹೇಳಿ ಅಂಕಿತ್ ಬೈಕ್‌ನಲ್ಲಿ ಹೊರಟ.

ಕೆಲವೇ ಗಂಟೆಗಳಲ್ಲಿ ಮಧ್ಯಾಹ್ನ ಏಟು ತಿಂದಿದ್ದ ಇಬ್ಬರು ಅಂಕಿತ್‌ಗೆ ಕರೆ ಮಾಡಿಸಿ ಯರೇಹಳ್ಳಿ ಬಳಿ ಬಾ, ಇಲ್ಲಿ ಮದ್ಯ ಕುಡಿದು ಹೋಗೋಣ ಎಂದು ಕರೆಸಿದ್ದರು. ಇದರಿಂದ ಅಂಕಿತ್ ಬೈಕ್‌ನಲ್ಲಿ ಒಬ್ಬನೇ ಅಲ್ಲಿಗೆ ತೆರಳಿದ್ದಾಗ ಏಕಾಏಕಿ ದಾಳಿಮಾಡಿ ಮಾರಕಾಸ್ತ್ರಗಳಿಂದ ಅಂಕಿತ್‌ನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿತ್ತು. ಹಬ್ಬದ ದಿನದಂದೇ ಮಗನನ್ನು ಕಳೆದುಕೊಂಡಿದ್ದ ಹೆತ್ತವರು ಕಣ್ಣೀರು ಸುರಿಸಿದ್ದರು. ಕೊಲೆಗಡುಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net