

ಸರಗೂರು: ಸರಗೂರು ತಾಲೂಕಿನ ಗದ್ದೇಹಳ್ಳ ಗ್ರಾಮದಲ್ಲಿ ಗುರವಾರ ಬೆಳಗ್ಗೆ ಕಾಡಾನೆಯೊಂದು ದಾಳಿ ನಡೆಸಿ ಯುವಕನನ್ನು ಬಲಿ ಪಡೆದಿದೆ.
ಗ್ರಾಮದ ಕಾಂತನಾಯಕ ಎಂಬುವರ ಮಗ ಅವಿನಾಶ್(24) ಆನೆ ದಾಳಿಗೆ ಬಲಿಯಾದವನು. ಅವಿನಾಶ್ ಗುರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಜಮೀನಿಗೆ ನೀರು ಹಾಯಿಸಲೆಂದು ಬಂದಿದ್ದಾನೆ. ಈ ವೇಳೆ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಗಳ ಗುಂಪೊಂದು ಏಕಾಏಕಿ ಅವಿನಾಶ್ ಮೇಲೆ ದಾಳಿ ನಡೆಸಿದ್ದು, ದಾಳಿಯ ತೀವ್ರತೆಗೆ ಅವಿನಾಶ್ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಾತಿನ ಚಕಮಕಿ: ಜಮೀನಿನಲ್ಲಿ ಕಾಡುಪ್ರಾಣಿಗಳು ಮೃತಪಟ್ಟರೆ ರೈತರ ಮೇಲೆ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸುತ್ತಾರೆ. ಅದೇ ರೈತ ಮೃತಪಟ್ಟರೆ ತಡವಾಗಿ ಬರುತ್ತಾರೆ. ಇದು ಬೇಜವಾಬ್ದಾರಿಯಲ್ಲದೆ ಮತ್ತೇನು? ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಂಡೀಪುರ ಡಿಸಿಎಫ್ ಪ್ರಭಾಕರನ್ ಮಾತನಾಡಿ, ಯುವಕ ಕಾಡಾನೆ ದಾಳಿಗೆ ಬಲಿಯಾಗಿರುವುದು ನಮಗೂ ನೋವು ತಂದಿದೆ. ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ನೀಡಲು ಅವಕಾಶ ಇದೆ. ಅದರಂತೆ 15 ಲಕ್ಷ ರೂ. ಪರಿಹಾರದ ಚೆಕ್ ನೀಡುತ್ತೇವೆ. ಅಲ್ಲದೆ ಕಚೇರಿಯಲ್ಲಿ ಉದ್ಯೋಗ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ನಮ್ಮ ಸಿಬ್ಬಂದಿ ರಾತ್ರಿ ವೇಳೆಯಲ್ಲಿ ಗಸ್ತು ಮಾಡಲು ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿ ಪರಿಹಾರದ ಚೆಕ್ ವಿತರಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳದಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.