

ಬಂಟ್ವಾಳ: ದ್ವಿಚಕ್ರ ವಾಹನಗಳ ಮಧ್ಯೆ ಮೆಲ್ಕಾರ್ ಮುಡಿಪು ರಾಜ್ಯ ಹೆದ್ದಾರಿಯ ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಬುಧವಾರ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬರಿಮಾರು ನಿವಾಸಿ ಸರ್ಪಾಝ್ (33) ಮೃತಪಟ್ಟ ವ್ಯಕ್ತಿಯಾಗಿದ್ದು, ಸಹಸವಾರಳಾಗಿದ್ದ ವಿದ್ಯಾರ್ಥಿನಿ ಜಾಸ್ಮೀನ್ (18) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಪಾಝ್ ಅವರು ತಂಗಿಯನ್ನು ದೇರಳಕಟ್ಟೆ ಕಾಲೇಜಿಗೆ ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗುವ ವೇಳೆ ಮಾರ್ನಬೈಲು ತಲುಪಿದಾಗ ಎದುರಿನಿಂದ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಇಮ್ತಿಯಾಜ್ ಎಂಬಾತ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ರಭಸಕ್ಕೆ ಸ್ಕೂಟರ್‌ನಲ್ಲಿದ್ದ ಅಣ್ಣ ತಂಗಿ ಇಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯವಾಗಿತ್ತು. ಕೂಡಲೇ ಇಬ್ಬರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಗಂಭೀರವಾಗಿ ಏಟಾಗಿದ್ದ ಸರ್ಪಾಝ್ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.