ಯಾಂತ್ರಿಕ ಬದುಕಿನತ್ತ ಯುವ ಪೀಳಿಗೆ

SRP_12-01jpj
ಶ್ರೀರಂಗಪಟ್ಟಣ ತಾಲೂಕಿನ ಪ್ರಕೃತಿ ತಾಣ ಕರೀಘಟ್ಟ ಬೆಟ್ಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮೈಸೂರು ಕ್ರೈಸ್ಟ್ ಕಾಲೇಜಿನ ನೂರಾರು ಯುವ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ನೀರುಣಿಸಿದರು.
Published on

ಶ್ರೀರಂಗಪಟ್ಟಣ: ಪ್ರಸಕ್ತ ಪೀಳಿಗೆಯ ನಮ್ಮ ಯುವ ಸಮೂಹ ಪ್ರಕೃತಿಯೊಂದಿಗೆ ಒಡನಾಟ ಕಳೆದುಕೊಂಡು ಯಂತ್ರಗಳಂತೆ ಯಾಂತ್ರಿಕ ಬದುಕಿಗೆ ಹೊಂದಿಕೊಳ್ಳುತ್ತಿರುವುದು ಆತಂಕಕಾರಿ ಎಂದು ಎಲ್ಲರೊಳಗಾಗು ಮಂಕುತಿಮ್ಮ ಟ್ರಸ್ಟ್‌ನ ಸಂಸ್ಥಾಪಕ ಹಾಗೂ ಸಮಾಜ ಸೇವಕ ವಿನಯ್ ಮಂಡ್ಯ ತಿಳಿಸಿದರು.

ತಾಲೂಕಿನ ಪ್ರಸಿದ್ದ ಪ್ರಕೃತಿ ತಾಣ ಕರಿಘಟ್ಟ ಬೆಟ್ಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನ ಮಹೋತ್ಸವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿ ಮಾತನಾಡಿದರು. ಯುವ ಪೀಳಿಗೆ ಪ್ರಕೃತಿಯೊಂದಿಗಿನ ಒಡನಾಟವನ್ನು ಮರೆತಿರುವ ಪರಿಣಾಮ ಇಡೀ ಮಾನವ ಕುಲವನ್ನು ವಿನಾಶದಂಚಿಗೆ ಕೊಂಡೊಯ್ಯುತ್ತಿದೆ. ಮನುಷ್ಯ ಪ್ರಕೃತಿಯೊಂದಿಗೆ ಸಮಾನ ಸ್ಥಿತಿಯ ಹೊಂದಾಣಿಕೆ ಮಾಡಿಕೊಂಡು ಮುಂದೆ ಸಾಗದಿದ್ದರೆ ಮುಂಬರುವ ದಿನಗಳು ಸಮಸ್ತ ಜೀವಸಂಕುಲಕ್ಕೆ ಅತ್ಯಂತ ಭೀಕರ ಸನ್ನಿವೇಶಗಳನ್ನು ತಂದೊಡ್ಡುತ್ತವೆ ಎನ್ನುವುದಕ್ಕೆ ಪ್ರಸ್ತುತ ದಿನಗಳಲ್ಲಿ ಈಗಾಗಲೇ ನಮ್ಮ ಕಣ್ಣೆದುರೆ ಉಂಟಾಗುತ್ತಿರುವ ಪ್ರಳಯ, ಪ್ರವಾಹ, ಭೂಕಂಪ ಹಾಗೂ ಬೆಟ್ಟ-ಗುಡ್ಡ ಭೂ ಕುಸಿತಗಳು ಮಾನವನಿಗೆ ಸಾಕ್ಷಿ ನೀಡುತ್ತಿವೆ. ಹೀಗಾಗಿ ಪ್ರಕೃತಿ ಉಳಿಸುವ ಕಾಳಜಿ ಮತ್ತು ಗೌರವ ನೀಡಿ ಸಂರಕ್ಷಿಸುವ ಆದ್ಯ ಕರ್ತವ್ಯ ನಮ್ಮದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

ಇದಕ್ಕೂ ಮೊದಲು ಮೈಸೂರು ಕ್ರೈಸ್ಟ್ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕ್ರಿಯಾ ತಂಡದ ಸದಸ್ಯರು ಪರಿಸರ ಪ್ರೇಮಿ ರಮೇಶ್ ಅವರ ಮಾರ್ಗದರ್ಶನದಲ್ಲಿ 200ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ನೀರುಣಿಸಿದರು. ಗುಡ್ಡ ಕುಸಿತ ಹಾಗೂ ಮಣ್ಣು ಸವಕಳಿಯನ್ನು ತಡೆಗಟ್ಟಲು ಬಿದಿರು ಗಿಡಗಳನ್ನು ವಿಶೇಷವಾಗಿ ನೆಡಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರಿನ ಕ್ರಿಯಾ ಸಮಾಜ ಸಮಿತಿಯ ಪರಿಚಾರಕರಾದ ನರಸಿಂಹಮೂರ್ತಿ, ಸಾಮಾಜಿಕ ಉಪ ಅರಣ್ಯಾಧಿಕಾರಿ ನಾಗರಾಜು, ಸಿಬ್ಬಂದಿ ಬಸವರಾಜು, ಪ್ರೊ.ಪ್ರಸನ್ನ ಕುಮಾರ್, ಪ್ರೊ. ವೇದರಾಜ್, ಪ್ರೊ.ರೇಖಾ, ಕಿರಣ್, ಬ್ರಿಜೇಶ್ ಹಾಗೂ ರಂಗ ಕಲಾವಿದೆ ಮಂಜುಳಾ ಮತ್ತು ವಕೀಲ ಪಿ.ಜೆ. ರಾಘವೇಂದ್ರ, ಪುನೀತ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net