

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ
ಗದ್ದೆ ಬೇಸಾಯ ಬಿಟ್ಟು ವಾಣಿಜ್ಯ ಬೆಳೆಯಾದ ಅಡಕೆ ತೋಟಕ್ಕೆ ಮನ ಮಾಡಿದ ಹಲವರ ಮಧ್ಯೆ ಶಿಶಿಲದಲ್ಲೊಬ್ಬ ಯುವ ಕೃಷಿಕ ಅಡಕೆ ತೋಟ ತೆಗೆದು ಗದ್ದೆ ಮಾಡಿ ಯಶಸ್ವಿ ಕೃಷಿಕ ಎನಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೊಳಕ್ಕೆಬೈಲು ಸಮೀಪದ ಹೊಸ ಒಕ್ಕಲು ಉದಯ ಪಾಠಕ್ ಹಾಗೂ ರಮಾ ಪಾಠಕ್ ದಂಪತಿಯ ಪುತ್ರ ಶಿವಪ್ರಸಾದ್ ಯು. ಪಾಠಕ್ ಈ ಅಪರೂಪದ ಸಾಹಸದ ರೂವಾರಿ.
29ರ ಹರೆಯದ ಶಿವಪ್ರಸಾದ್ ಭೌತ ಶಾಸ್ತ್ರದಲ್ಲಿ ಎಂ.ಎಸ್ಸಿ. ಪದವೀಧರ. ವಯಸ್ಸಾದ ಅಪ್ಪ-ಅಮ್ಮ ಮಾತ್ರ ಊರಲ್ಲಿ ಕೃಷಿ ನಿರ್ವಹಿಸಿಕೊಂಡು ಬರಬೇಕಾದ ಪರಿಸ್ಥಿತಿಯಿತ್ತು. ಈಗಿನ ಟ್ರೆಂಡ್ ಪ್ರಕಾರ ಊರಿನ ಜಾಗ ಮಾರಾಟ ಮಾಡಿ ಪೇಟೆ ಜೀವನವನ್ನು ನೆಚ್ಚಿ, ಹೆತ್ತವರನ್ನು ಕರೆದುಕೊಂಡು ಹೋಗುವವರೇ ಜಾಸ್ತಿ. ಆದರೆ ಪಾಠಕ್ ಮಾತ್ರ ಅನಿವಾರ್ಯವಾಗಿ ಕೈತುಂಬ ಸಂಬಳ ನೀಡುತ್ತಿದ್ದ ನೌಕರಿಗೆ ಗುಡ್ ಬೈ ಹೇಳಿ ಊರು ಸೇರಿಕೊಂಡರು.
ಎತ್ತರವಾಗಿ ಬೆಳೆದಿದ್ದ ಅಡಕೆ ತೋಟಕ್ಕೆ ಆಗಾಗ ಸಿಡಿಲು ಬಡಿದು ಮರ ಸತ್ತು ಹೋಗುವುದು ಸಾಮಾನ್ಯವಾಗಿತ್ತು. ಬದಲಿ ಗಿಡಗಳನ್ನು ಹಾಕಿ ಮತ್ತೆ ಅಡಕೆ ಕೃಷಿಯತ್ತ ಮುಖ ಮಾಡದೆ ಈ ಯುವಕ ತೋಟದಲ್ಲಿದ್ದ 70ಕ್ಕೂ ಹೆಚ್ಚು ಅಡಕೆ ಮರಗಳನ್ನು ತೆಗೆದು ತೋಟದ ಮಧ್ಯೆ ಇದ್ದ ಈ ಜಾಗದಲ್ಲಿ ಜೆಸಿಬಿ ತಂದು ತಟ್ಟುಗೊಳಿಸಿ ಅಲ್ಲಿ ಗದ್ದೆ ನಿರ್ಮಾಣ ಕಾರ್ಯ ಆರಂಭಿಸಿದರು. ಬಳಿಕ ತನ್ನಲ್ಲೇ ಇದ್ದ ಚಿಕ್ಕ ಟ್ರ್ಯಾಕ್ಟರ್ ಮೂಲಕ ನೆಲ ಹದಗೊಳಿಸಿದರು. ಸಣ್ಣ ಟ್ರ್ಯಾಕ್ಟರ್‌ನಲ್ಲಿ ಸರಿಯಾಗಿ ಉಳುಮೆ ಮಾಡಲು ಸಾಧ್ಯವಾಗದ ಕಾರಣ ತಾನೇ ನೊಗವನ್ನು ಬೆನ್ನ ಮೇಲೆ ಹಾಕಿಕೊಂಡು ಕೈಯಲ್ಲಿ ಎಳೆದುಕೊಂಡು ಉಳುಮೆ ಮಾಡಿದರು. ಈ ಎಲ್ಲ ಪ್ರಕ್ರಿಯೆಗಳು ಹೊಸದೇ ಆದ್ದರಿಂದ ಪಾಠಕ್ ಅವರಿಗೆ ಲಾಭದ ಬಗ್ಗೆ ಯೋಚನೆ ಇರಲಿಲ್ಲ. 60ಪಿಳ್ಳೆ ಎನ್ನುವ ತಳಿಯ ಬೀಜವನ್ನು ಹಾಕಿ ಬೆಳೆ ತೆಗೆಯುವ ಬಗ್ಗೆ ಯೋಚಿಸಿ ಮುಂದುವರಿದರು. ಪಾಠಕ್ ಅವರ ತೋಟದಲ್ಲಿ ನೀರಿನ ವ್ಯವಸ್ಥೆಗೆಂದು ಕೊಳವೆ ಬಾವಿ ಇಲ್ಲ. ಕೊಳಕ್ಕೆಬೈಲು ಎಂಬಲ್ಲಿ ಕಪಿಲಾ ನದಿಗೆ ಹಾಕಿರುವ ಕಟ್ಟದಿಂದಲೇ ಇವರ ಕೃಷಿ ತೋಟಕ್ಕೆ ಮತ್ತು ಗದ್ದೆಗೆ ನೀರುಣಿಸಲಾಗುತ್ತಿದೆ. ಪ್ರಯೋಗಾತ್ಮಕವಾಗಿ ಕಡಿಮೆ ಜಾಗದಲ್ಲಿ ಬೆಳೆದರೂ ತಾನು ಉತ್ತಮ ಬೆಳೆಯನ್ನು ಈ ಬಾರಿ ಪಡೆಯುತ್ತೇನೆ ಎಂದು ಭರವಸೆಯಿಂದ ಹೇಳುತ್ತಾರೆ. ಮನಶಾಂತಿಗಾಗಿ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದೇನೆ ಎಂದು ಖುಷಿಯಿಂದ ಹೇಳುತ್ತಾರೆ.
ಗದ್ದೆ ಬೇಸಾಯ ಮಾಡುವ ಯೋಚನೆಗಿಂತಲೂ ಮೊದಲು ಶಿವಪ್ರಸಾದ್ ಕರೊನಾ ಸಮಯದಲ್ಲಿ ಫಸಲು ನೀಡದ ಹಳೇ ಅಡಕೆ ಗಿಡಗಳನ್ನು ಕಡಿದು, ತಾವೇ ಸ್ವತಃ ದುಡಿಮೆ ಮಾಡಿ 450 ಅಡಕೆ ಸಸಿಗಳನ್ನು ನೆಟ್ಟರು. ಗಿಡ ಈಗ ಫಲ ನೀಡುವ ಹಂತದಲ್ಲಿದೆ. ಎಲ್ಲವೂ ಹೊಸದಾಗಿರುವ ಕಾರಣ ಪಾಠಕ್ ಒಂದೊಂದಾಗಿ ಕಲಿತರು. ತಮ್ಮ ಕೃಷಿ ತೋಟದ ಅಡಕೆ ಗಿಡಗಳಿಗೆ ತಾವೇ ಮರವೇರಿ ಮದ್ದು ಸಿಂಪಡಣೆ ಮಾಡುತ್ತಾರೆ. ಫಸಲು ನೀಡುವ ಒಂದು ಸಾವಿರ ಅಡಕೆ ಮರದ ಕೊಯ್ಲು ಕೂಡ ಇವರೊಬ್ಬರೇ ಮಾಡುತ್ತಿದ್ದಾರೆ. ಕಳೆದ ವರ್ಷ ಅರಿಶಿಣ ಬೆಳೆದು ಲಾಭದಾಯಕ ಬೆಳೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಕೆಲ ಸಮಯಗಳ ಹಿಂದೆ ಉದ್ದು ಬೆಳೆ ತೆಗೆಯುವ ಸಾಹಸಕ್ಕೆ ಮುಂದಾಗಿದ್ದರು. 1500ಕ್ಕೂ ಹೆಚ್ಚು ಅಡಕೆ ಗಿಡಗಳು, 60ಕ್ಕೂ ಹೆಚ್ಚು ತೆಂಗಿನ ಮರಗಳು, ತೋಟದ ನಡು ನಡುವೆ ಕೋ ಕೋ ಗಿಡಗಳು ಇದ್ದರೂ ಪಾಠಕ್ ಒಬ್ಬರೇ ಇವೆಲ್ಲವನ್ನು ನಿಭಾಯಿಸಿಕೊಂಡು ಬರುತ್ತಿದ್ದಾರೆ.
ಊರಿನಲ್ಲಿ ಸ್ವಲ್ಪ ಕೃಷಿ ಭೂಮಿ ಇದ್ದು ಪೇಟೆಯಲ್ಲಿ ಕೆಲಸ ಇರುವ ಯುವಕರು ತಪ್ಪಿಯೂ ಅಪ್ಪ ಅಮ್ಮನಿಗೆ ಆರಾಮ ಆಗಲಿ ಎಂದು ಜಾಗ ಮಾರಾಟ ಮಾಡಬೇಡಿ. ಜಾಗ ಪಾಳು ಬಿದ್ದರೂ ಪರವಾಗಿಲ್ಲ ಮುಂದೊಂದು ದಿನ ಯಾಕೆ ಮಾರಿದೆ ಎನ್ನುವ ಕೊರಗು ಕಾಡುತ್ತದೆ. ಕೃಷಿ ಭೂಮಿಯಲ್ಲಿ ಸಿಗುವ ಹೂಡಿಕೆಯ ಮೇಲಿನ ಆದಾಯ ಯಾವುದೇ ಬ್ಯಾಂಕ್ ಅಥವಾ ಸ್ಟಾಕ್ ಮಾರ್ಕೆಟ್‌ನಲ್ಲಿ ಸಿಗಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಯಾರೂ ಕೈಬಿಟ್ಟರು ಭೂಮಿತಾಯಿ ಕೈ ಬಿಡುವುದಿಲ್ಲ.- ಶಿವಪ್ರಸಾದ್ ಯು.ಪಾಠಕ್, ಯುವ ಕೃಷಿಕ, ಶಿಶಿಲ