More

    ಮಳೆಗಾಲಕ್ಕೆ ಸಜ್ಜುಗೊಳ್ಳದ ನಗರ: ಕಾಸರಗೋಡಿನ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ

    ಪುರುಷೋತ್ತಮ ಪೆರ್ಲ ಕಾಸರಗೋಡು

    ಜಿಲ್ಲೆಯಲ್ಲಿ ಮಳೆಗಾಲಪೂರ್ವ ಸ್ವಚ್ಛತಾ ಕಾರ್ಯ ಇನ್ನೂ ಆರಂಭಗೊಳ್ಳದಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಬೇಸಿಗೆ ಮಳೆ ಸುರಿದು ಅಪಾಯದ ಸೂಚನೆ ನೀಡಿದ್ದರೂ ಜಿಲ್ಲಾಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯನ್ವಯ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ತಲಪ್ಪಾಡಿಯಿಂದ ಚೆರ್ಕಳವರೆಗಿನ ಪೇಟೆ ಜನತೆಗೆ ಮಳೆಗಾಲದ ಸಮಸ್ಯೆ ಎದುರಿಸುವ ಬಗ್ಗೆ ಚಿಂತೆ ಎದುರಾಗಿದೆ. ರಸ್ತೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿರುವುದರಿಂದ ಒಳಚರಂಡಿ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವಂತಾಗಿದೆ.

    ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ರಸ್ತೆ ಬದಿ ಸ್ವಚ್ಛತಾ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಮಳೆಗಾಲಕ್ಕೂ ಮೊದಲು ರಸ್ತೆ ಅಂಚಿಗಿರುವ ಕುರುಚಲು ಪೊದೆ ಹಾಗೂ ಚರಂಡಿ ಶುಚೀಕರಿಸುವ ಕಾರ್ಯಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ ಮುಂದಾಗದಿರುವುದರಿಂದ ಮಳೆಗಾಲದಲ್ಲಿ ಭಾರಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಕಾಸರಗೋಡು ನಗರದ ಪ್ರಮುಖ ಕೇಂದ್ರಗಳಲ್ಲೇ ಶುಚೀಕರಣ ಕಾರ್ಯ ನಡೆಯುತ್ತಿಲ್ಲ. ಕಾಸರಗೋಡು ನಗರಸಭೆ ವಠಾರದಲ್ಲಿ ಭಾರಿ ಪ್ರಮಾಣದಲ್ಲಿ ಮೂಟೆ ಬಿಗಿದಿಡಲಾಗಿರುವ ತ್ಯಾಜ್ಯ ವಿಲೇವಾರಿ ಇನ್ನೂ ನಡೆಸಿಲ್ಲ. ಇನ್ನು ನಗರಸಭಾ ಕಚೇರಿ ಎದುರಿನ ನೀರು ಹರಿಯುವ ಚರಂಡಿಯೂ ಶುಚೀಕರಣ ಕಂಡಿಲ್ಲ.

    ಮಳೆಗಾಲಕ್ಕೆ ಸಜ್ಜುಗೊಳ್ಳದ ನಗರ: ಕಾಸರಗೋಡಿನ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ

    ಕರಂದಕ್ಕಾಡು ಸರ್ಕಾರಿ ಬೀಜೋತ್ಪಾದನಾ ಕೇಂದ್ರದ ಆಸುಪಾಸಿನ ಚರಂಡಿಗಳು ಪ್ಲಾಸ್ಟಿಕ್‌ಬಾಟಲಿ, ತರಗೆಲೆ ಸೇರಿದಂತೆ ನಾನಾ ತ್ಯಾಜ್ಯದಿಂದ ತುಂಬಿಕೊಂಡಿದೆ. ಕಾಸರಗೋಡು-ಮಧೂರು ರಸ್ತೆ, ಕಡಪ್ಪುರ ರಸ್ತೆ, ಉಳಿಯತ್ತಡ್ಕ-ಚೌಕಿ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳ ಚರಂಡಿ ಶುಚೀಕರಣ ಕಂಡಿಲ್ಲ. ಕುಂಬಳೆ ಹೈಸ್ಕೂಲ್ ರಸ್ತೆ ಚರಂಡಿಯೂ ಶುಚೀಕರಣ ನಡೆಸಿಲ್ಲ. ತ್ಯಾಜ್ಯ ಮೂಟೆಕಟ್ಟಿ ಇಲ್ಲಿ ಪಾದಚಾರಿಗಳ ಕಾಲ್ನಡೆ ಹಾದಿಯಲ್ಲೇ ಡಂಪಿಂಗ್ ಮಾಡಲಾಗಿದೆ. ಇನ್ನು ಗ್ರಾಮೀಣ ಪ್ರದೇಶಗಳ ರಸ್ತೆ ಚರಂಡಿಗಳೂ ಶುಚೀಕರಣ ಕಂಡಿಲ್ಲ. ಬಹುತೇಕ ಕಡೆ ಹೋಟೆಲ್, ತಂಪುಪಾನೀಯ, ತರಕಾರಿ ಅಂಗಡಿ, ಮೀನುಮಾರುಕಟ್ಟೆ, ಸಣ್ಣ ಕೋಳಿಫಾರಂ ಸೇರಿದಂತೆ ವಿವಿಧೆಡೆಯಿಂದ ಸಂಗ್ರಹಗೊಳ್ಳುವ ತ್ಯಾಜ್ಯವನ್ನು ರಸ್ತೆ ಅಂಚಿಗೆ ಎಸೆಯುವ ಮೂಲಕ ವಿಕೃತಿ ಪ್ರದರ್ಶಿಸಲಾಗುತ್ತಿದೆ.

    ಡಂಪಿಂಗ್ ಯಾರ್ಡ್

    ಜಿಲ್ಲೆಯ ಬಹುತೇಕ ಪ್ರದೇಶ ಇಂದು ಡಂಪಿಂಗ್ ಯಾರ್ಡ್‌ಗಳಾಗಿ ಬದಲಾಗುತ್ತಿವೆ. ಜನರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದರೆ, ಸರ್ಕಾರಿ ಪ್ರಾಯೋಜಿತ ಡಂಪಿಂಗ್ ಕೇಂದ್ರಗಳೂ ನಗರದಲ್ಲಿ ಕಂಡುಬರುತ್ತಿವೆ. ಕಾಸರಗೋಡು ನಗರಸಭಾ ಕಚೇರಿ ಅಂಚಿಗಿರುವ ವನಿತಾ ಸಭಾಂಗಣ ಬಳಿ ತ್ಯಾಜ್ಯ ವಿಲೇವಾರಿ ಮಾಡದೆ, ಮೂಟೆಕಟ್ಟಿ ದಾಸ್ತಾನಿರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಪ್ರಮುಖ ಇಲಾಖೆಗಳನ್ನೊಳಗೊಂಡ ಸಿವಿಲ್ ಸ್ಟೇಷನ್ ವಠಾರವೂ ತ್ಯಾಜ್ಯದ ಕೊಂಪೆಯಾಗಿ ಬದಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಬಹುತೇಕ ಕಡೆ ಅಳವಡಿಸಿರುವ ಎಂಸಿಎಫ್‌ಗಳು ತುಂಬಿಕೊಂಡಿದ್ದು, ತ್ಯಾಜ್ಯ ಪೆಟ್ಟಿಗೆಯಿಂದ ಹೊರ ಚೆಲ್ಲುತ್ತಿದೆ. ಈ ತ್ಯಾಜ್ಯವನ್ನು ನಾಯಿ, ಪಕ್ಷಿಗಳು ಎಳೆದಾಡಿ ಎಲ್ಲೆಂದರಲ್ಲಿ ತಂದು ಹಾಕುತ್ತಿದ್ದು, ಇದರಿಂದ ಸಾಮಾಜಿಕ ಆರೋಗ್ಯ ಹಾಳಾಗುತ್ತಿರುವುದಾಗಿ ಜನಸಾಮಾನ್ಯರು ದೂರುತ್ತಾರೆ. ರಸ್ತೆಬದಿ ತ್ಯಾಜ್ಯ ಸುರಿಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವ ಮೊದಲು ಅಧಿಕಾರಿಗಳು ಜಾಗೃತರಾಗಬೇಕಾದ ಅಗತ್ಯವಿದೆ. ತಮ್ಮ ಕಚೇರಿ ಎದುರು ತ್ಯಾಜ್ಯ ಗುಡ್ಡೆ ಹಾಕಿಕೊಂಡು, ಸಾರ್ವಜನಿಕರಿಗೆ ಬೋಧನೆ ಮಾಡುವ ಅಧಿಕಾರಿಗಳಿಗೆ ಜನರೇ ಪಾಠಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

    ಬೇಸಿಗೆ ಮಳೆ ಈಗಾಗಲೇ ಮುನ್ಸೂಚನೆ ನೀಡಿದ್ದು, ನಗರದ ವಿವಿಧ ಭಾಗದಲ್ಲಿ ಚರಂಡಿ ಶುಚಿಗೊಳಿಸುವ ಕಾರ್ಯಕ್ಕೆ ನಗರಸಭೆ ಶೀಘ್ರ ಮುಂದಾಗಲಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಕಾಸರಗೋಡು ನಗರಕ್ಕೂ ಚರಂಡಿ ನೀರು ನುಗ್ಗುವ ಅಪಾಯ ಹೆಚ್ಚಾಗಿರುವುದರಿಂದ ಹೆಚ್ಚು ಜಾಗ್ರತೆ ಪಾಲಿಸಬೇಕಾದ ಅಗತ್ಯವಿದೆ. ನಗರಸಭಾ ಕಚೇರಿ ಬಳಿಯಿರುವ ತ್ಯಾಜ್ಯದ ಮೂಟೆ ಸ್ಥಳಾಂತರಿಸುವುದರೊಂದಿಗೆ ನಗರದ ಚರಂಡಿ ಶುಚೀಕರಿಸಲಾಗುವುದು. ರಸ್ತೆ ಅಂಚಿಗೆ ತ್ಯಾಜ್ಯ ಸುರಿಯದಂತೆ ವ್ಯಾಪಾರಿಗಳು ಹಾಗೂ ಜನರಲ್ಲಿ ಜಗೃತಿ ಮೂಡಿಸಲಾಗುತ್ತಿದೆ.
    – ಅಬ್ಬಸ್ ಬೀಗಂ, ನಗರಸಭಾ ಅಧ್ಯಕ್ಷರು, ಕಾಸರಗೊಡು ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts