More

  ಕೊಲೆ ಖಂಡಿಸಿ ವೀರಶೈವ ಸಮಾಜದಿಂದ ಪ್ರತಿಭಟನೆ

  ದಾವಣಗೆರೆ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆಯನ್ನು ಖಂಡಿಸಿ ಜಿಲ್ಲಾ ವೀರಶೈವ ಸಮಾಜದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
   ಮಹಾನಗರ ಪಾಲಿಕೆ ಮುಂಭಾಗ ಸೇರಿದ ಸಮಾಜದವರು ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು, ನಟ ದರ್ಶನ್ ವಿರುದ್ಧ ಧಿಕ್ಕಾರ ಕೂಗಿದರು. ಈ ವಿಷಯದಲ್ಲಿ ಸರ್ಕಾರ ಕುರುಡಾಗಿದೆ ಎಂದು ಆರೋಪಿಸಿದರು.
   ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳನ್ನೂ ಬಂಧಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ರಾಜಕೀಯ ಒತ್ತಡಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.
   ಸಮಾಜದ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಅಧಿಕಾರಿಗಳು, ರಾಜಕಾರಣಿಗಳು ಆರೋಪಿ ದರ್ಶನ್‌ಗೆ ಒಳಗೊಳಗೇ ಬೆಂಬಲಿಸುತ್ತಿದ್ದಾರೆ. ಆತ ಅಮಾಯಕ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ದೂರಿದರು.
   ರೇಣುಕಸ್ವಾಮಿ ಅವರನ್ನು ಅಪಹರಣ ಮಾಡಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಈ ಪ್ರಕರಣದಿಂದ ಪಾರಾಗಲು ಹಣದ ಆಮಿಷ ಒಡ್ಡಲಾಗುತ್ತಿದೆ ಎಂದರು.
   ಈ ವಿಷಯದಲ್ಲಿ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿರುವಂತೆ ಕಾಣುತ್ತಿದೆ. ಗೃಹ ಸಚಿವರ ಮೃದು ಮಾತು ಇದಕ್ಕೆ ನಿದರ್ಶನವಾಗಿದೆ. ನೊಂದ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲದಿದ್ದರೆ ನಾವೇ ಕಂತೆಭಿಕ್ಷೆ ಬೇಡಿ ಅಷ್ಟು ಹಣವನ್ನು ಸಂಗ್ರಹಿಸಿ ಕೊಡುತ್ತೇವೆ ಎಂದು ಹೇಳಿದರು.
   ಈ ಹೋರಾಟದಲ್ಲಿ ಭಾಗಿಯಾಗುವಂತೆ ಎಲ್ಲ ಸಮಾಜದವರಿಗೆ ಪತ್ರ ಬರೆಯಲಾಗುವುದು. ಮಠಾಧೀಶರೂ ಧ್ವನಿ ಎತ್ತಬೇಕಿದೆ. ಇನ್ನು ಮುಂದೆ ದರ್ಶನ್ ಚಲನಚಿತ್ರಗಳಲ್ಲಿ ನಟಿಸಬಾರದು ಎಂದು ಹೇಳಿದರು.
   ಸಮಾಜದ ಮುಖಂಡರಾದ ತ್ಯಾವಣಿಗೆ ವೀರಭದ್ರಸ್ವಾಮಿ, ಸಿ. ಪಂಚಾಕ್ಷರಯ್ಯ ಬಸಾಪುರ, ಕೋಟೆಹಾಳ್ ಸಿದ್ದೇಶ್, ಮಲ್ಲೇಶ್ವರಪ್ಪ ಶ್ಯಾಗಲೆ, ವಾಗೀಶ್ವರಯ್ಯ, ಎಲ್.ಎಂ.ಆರ್. ಬಸವರಾಜಯ್ಯ, ಬಿ.ಎಂ. ರವಿ, ಕಂಬಳಿ ಹಾಲಸ್ವಾಮಿ, ಚೇತನ್ ಕುಮಾರ್, ಎಸ್.ಎಂ. ಮಂಜುನಾಥ ಸ್ವಾಮಿ ಇದ್ದರು.

  See also  ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts