

* ಮಣ್ಣಿನ ನಂಟಿನಲ್ಲಿ ಸುಂದರ ಬದುಕು ಕಟ್ಟಿಕೊಂಡ ಪದವೀಧರ
* ಬೆಳೆಗೆ ಮಾರುಕಟ್ಟೆ ಕಂಡುಕೊಂಡ ಚಾಣಾಕ್ಷ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಸಾಧನೆ ಮಾಡಲು ಯಾವ ಕ್ಷೇತ್ರವಾದರೂ ಅಥವಾ ಯಾವ ವಯಸ್ಸಾದರೇನು? ಕೆಲಸದಲ್ಲಿ ಶ್ರದ್ಧೆ ಹಾಗೂ ಪರಿಶ್ರಮವಿದ್ದರೆ ಸಾಧಕನ ಪಟ್ಟ ಹಿಂಬಾಲಿಸುತ್ತದೆ ಎಂಬುದಕ್ಕೆ ತಾಲೂಕಿನ ಪುಟ್ಟ ಗ್ರಾಮವಾದ ಅರಳುಕುಪ್ಪೆದೊಡ್ಡಿಯ ಯುವ ಕೃಷಿಕ ನಂಜುಂಡಸ್ವಾಮಿ ಉದಾಹರಣೆ ಎಂದರೆ ತಪ್ಪಾಗಲಾರದು.
ಹೌದು..., ತಾಲೂಕಿನ ಗಡಿಗ್ರಾಮದ ಯುವ ಕೃಷಿಕ ನಂಜುಂಡಸ್ವಾಮಿ, ಕಳೆದ ಹತ್ತು ವರ್ಷಗಳಿಂದ ಸಾವಯವ ಕೃಷಿ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ತಂದೆಯ ಪಿತ್ರಾರ್ಜಿತ ಜಮೀನಿನಲ್ಲಿ ವಿವಿಧ ರೀತಿಯ ಕೃಷಿ ಚಟುವಟಿಕೆ ನಡೆಸುವ ಜತೆಗೆ, ಬೆಳೆಗೆ ತಾವೇ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪ್ರತಿಷ್ಠಿತ ಜಿಕೆವಿಕೆಯ 2020ರ ಯುವ ಕೃಷಿಕ ಪ್ರಶಸ್ತಿ ಸೇರಿ ಹಲವಾರು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವುದೇ ಕೃಷಿ ಸಾಧನೆಗೆ ಸಾಕ್ಷಿ ಎನ್ನಬಹುದು.
ಗ್ರಾಮದ ಲೇಟ್ ಶಿವಲಿಂಗಯ್ಯ ಹಾಗೂ ಕೆಂಪಮ್ಮ ದಂಪತಿ ಪುತ್ರನಾಗಿರುವ ಇವರು ಪದವೀಧರ. ಸುಸ್ಥಿರ ಕೃಷಿ ಡಿಪ್ಲೊಮಾ ಹಾಗೂ ಜಾನಪದ ಡಿಪ್ಲೊಮಾ ಮಾಡಿಕೊಂಡಿದ್ದಾರೆ. ವಿದ್ಯಾಭ್ಯಾಸದ ನಂತರ ಎಲ್ಲರಂತೆ ಬದುಕು ಕಟ್ಟಿಕೊಳ್ಳಲು ರಾಜಧಾನಿ ಸೇರಿದ ಇವರಿಗೆ, ಕೈತುಂಬ ಸಂಬಳ ಸಿಗುವ ಕೆಲಸ ಸಿಕ್ಕರೂ, ಮಣ್ಣಿನ ಸೆಳೆತ ಇವರನ್ನು ಅಲ್ಲಿರಲು ಬಿಡಲಿಲ್ಲ. ನೌಕರಿಯನ್ನು ಬಿಟ್ಟು, ಮಣ್ಣಿನ ನಂಟು ಬೆಳೆಸಿಕೊಂಡು ಅದರಲ್ಲೆ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಪತ್ನಿ ಸುಮಲತಾ ಇವರಿಗೆ ಹೆಗಲಾಗಿದ್ದಾರೆ.
ಸುಸ್ಥಿರ ಕೃಷಿ ಅಧ್ಯಯನದಲ್ಲಿ ಡಿಪ್ಲೊಮಾ ಪಡೆದಿರುವ ನಂಜುಡಸ್ವಾಮಿ, ತನ್ನ ಪೂರ್ವಜರ ಮೂರು ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವ ಕೃಷಿ ಕೈಗೊಂಡು ಅದರಲ್ಲಿ ಯಶಸ್ಸು ಗಳಿಸಿದ್ದಾರೆ. ಸಿರಿಧಾನ್ಯಗಳಾದ ನವಣೆ, ಆರ್ಕ, ಸಜ್ಜೆ, ರಾಗಿ, ಸಾಮೆ, ಮಾವು, ಜರ್ಮನಿಯಲ್ಲಿ ಬೆಳೆಯುವ ಅರಗು, ಚಾವಾಗಳನ್ನು ಬೆಳೆಯುವ ಮೂಲಕ ಸಾವಯವ ಕೃಷಿ ನಡೆಸುತ್ತಿದ್ದಾರೆ. ಇದರೊಂದಿಗೆ ಅರಣ್ಯ ಕೃಷಿಗೂ ಒತ್ತು ನೀಡಿದ್ದು, ಅತ್ತಿಮರ, ಹುಣಸೆ, ನೇರಳೆ, ಬೇಲದ ಮರ, ಮಾವು, ಹಲಸುಗಳನ್ನು ಬೆಳೆಸುತ್ತಿದ್ದಾರೆ. ಇವರು ಮಳೆಯಾಶ್ರಿತ ಕೃಷಿಯನ್ನು ಅವಲಂಬಿಸಿದ್ದು, ಈ ವರ್ಷ ಮುಖ್ಯವಾಗಿ ದೇಶದ ಎಲ್ಲ ಬಗೆಯ ಮಾವಿನ ಸಸಿಗಳನ್ನು ಒಂದು ಎಕರೆಯಲ್ಲಿ ಪ್ರಾತ್ಯತೆಗಾಗಿ ಬೆಳೆಸುತ್ತಿರುವುದು ವಿಶೇಷ.
ಕೃಷಿ ಕ್ಷೇತ್ರದಲ್ಲಿ ಕೇವಲ ಬೆಳೆ ಬೆಳೆಯಲು ಮಾತ್ರ ಸೀಮಿತವಾಗದ ನಂಜುಡಸ್ವಾಮಿ, ಸಾಮಾಜಿಕ ಚಳವಳಿ, ರೈತ ಸಂಟನೆ ಹಾಗೂ ಜಾನಪದ ಕ್ಷೇತ್ರಕ್ಕೂ ತನ್ನ ಬದುಕನ್ನು ಅರ್ಪಿಸಿಕೊಳ್ಳುವ ಮೂಲಕ ತನ್ನದೇ ಆದ ಸುಸ್ಥಿರ ಬದುಕನ್ನು ಕಟ್ಟಿಕೊಂಡಿರುವುದು ವಿಶೇಷ. ಇವರ ನೈಸರ್ಗಿಕ ಹಾಗೂ ಮಳೆಯಾಶ್ರಿತ ಕೃಷಿ ಪದ್ಧತಿಯ ವೀಣೆಗಾಗಿ ಹಲವಾರು ದೇಶದ ಕೃಷಿ ವಿವಿಯ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ. ನೈಸರ್ಗಿಕವಾಗಿ ಬೆಳೆದ ಮಾವನ್ನು ನೈಸರ್ಗಿಕವಾಗಿ ಮಾಗಿಸಿ ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳ ಬಾಗಿಲಿಗೆ ತಲುಪಿಸುವ ಮೂಲಕ ಹೊಸ ರೈತರ ಮಾರುಕಟ್ಟೆಯನ್ನು ಸೃಷ್ಟಿಸಿರುವುದು ಇವರ ಸಾಧನೆಯಾಗಿದೆ. ಇದಕ್ಕಾಗಿ ಮಣ್ಮಯಿ ಎಂಬ ಸಾವಯವ ಕೃಷಿಕರ ಬಳಗ ಕಟ್ಟಿಕೊಂಡಿದ್ದಾರೆ. ಇದಲ್ಲದೇ, ತನ್ನ ಸಾವಯವ ಉತ್ಪನ್ನಗಳ ನೇರ ಮಾರುಕಟ್ಟೆಗಾಗಿ ನನ್ನದೇ ಸ್ವಂತ
ಕೆಕೆ ನ್ಯಾಚುರಲ್ ಎಂಬ ಬ್ರಾಂಡ್ ರೂಪಿಸಿಕೊಂಡಿದ್ದಾರೆ.
ಕಷ್ಟಪಟ್ಟು ಬೆಳೆಯುವ ಬೆಳೆಗೆ ಸೂಕ್ತ ಬೆಲೆಯಿಲ್ಲ ಎಂದು ಕೊರಗುವ ರೈತರ ನಡುವೆ ಯಾವುದೇ ದಲ್ಲಾಳಿಗಳನ್ನು ನೆಚ್ಚಿಕೊಳ್ಳದೆ ಉತ್ಪನ್ನಗಳಿಗೆ ತಾನೇ ರಾಯಭಾರಿಯಾಗುವ ಜತೆಗೆ ಮಾರುಕಟ್ಟೆ ಸೃಷ್ಟಿಸಿಕೊಂಡಿರುವುದು ಇವರ ಸಾಧನೆ. ಸ್ವಂತ ಬದುಕಿನ ಬಗ್ಗೆ ಮಾತ್ರ ಚಿಂತಿಸದ ಇವರು, ಇತರ ರೈತರಿಗೂ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಸಮಾನ ಮನಸ್ಕರ ಜತೆ ಸೇರಿ ಮಣ್ಮಯಿ ಬಳಗ ಎಂಬ ತಂಡ ಕಟ್ಟಿಕೊಂಡು ಆ ಮೂಲಕ ಸಾವಯವ ಕೃಷಿ, ಸುಸ್ಥಿರ ಕೃಷಿ ಅಧ್ಯಯನ ತರಬೇತಿ ನೀಡುತ್ತಿದ್ದಾರೆ. ಪ್ರತಿ ವರ್ಷ ತನ್ನ ತೋಟದಲ್ಲಿ ಮಾವು ಕೀಳುವ ಸಂಭ್ರಮ ಎಂಬ ಹೆಸರಡಿ ಬೆಂಗಳೂರಿನ ಯುವಕರು ಹಾಗೂ ಸಾರ್ವಜನಿಕರು ತೋಟಕ್ಕೆ ಕರೆತಂದು ಮಾವನ್ನು ಕಟಾವು ಮಾಡಿಸುವ ಪ್ರಾತ್ಯತೆ ನಡೆಸುತ್ತಿದ್ದಾರೆ. ಇವರ ಸುಸ್ಥಿರ ಕೃಷಿಯ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಪಡೆದಿರುವ ವಿದೇಶಿಗರು ಸೇರಿ ಸಾವಿರಾರು ಕೃಷಿ ಪ್ರಿಯರು ತೋಟಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.
ನಂಜುಡಸ್ವಾಮಿ, ಯುವ ರೈತ.