

ಕಾರ್ಕಳ: ವಿದ್ಯಾರ್ಥಿಯ ಸಾಧನೆಯ ಹಿಂದೆ ಗುರುಗಳ ಪಾತ್ರ ಮಹತ್ವದ್ದು. ಅಂತಹ ಗುರುಗಳನ್ನು ಯಾವುದೇ ಕ್ಷೇತ್ರದಲ್ಲಿ ಮುನ್ನುಗ್ಗುವವರು ಆರಿಸಿಕೊಳ್ಳಬೇಕು. ಅಡೆತಡೆಗಳನ್ನು ಸಾಧನೆಯ ಏಣಿಯಾಗಿಸಿಕೊಂಡವರು ಸಾಧಕರಾಗಿ ಹೊರಬರುತ್ತಾರೆ ಎಂದು ಉಜಿರೆ ಎಸ್.ಡಿ.ಎಂ.ಕಾಲೇಜಿನ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ರಮೇಶ್ ಎಚ್ ಹೇಳಿದರು.
ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ-2024ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕ್ರೀಡಾಕೂಟ ಉದ್ಘಾಟಿಸಿದ ಕಾಮನ್‌ವೆಲ್ತ್ ವೇಯ್ಟಲಿಫ್ಟಿಂಗ್ ಪದಕ ವಿಜೇತ ಕ್ರೀಡಾಪಟು ಗುರುರಾಜ್ ಪೂಜಾರಿ ಮಾತನಾಡಿ, ಕ್ರೀಡೆಯಲ್ಲಿ ತೊಡಗಿಕೊಂಡವರಿಗೆ ಇಂದು ಸರ್ಕಾರದ ವಿವಿಧ ಸ್ತರಗಳಲ್ಲಿ ಉದ್ಯೋಗ ಪಡೆಯುವುದಕ್ಕೆ ಸಾಧ್ಯವಿದೆ. ಅದರ ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಕಳ ಜ್ಞಾನಸುಧಾ ಮುಖ್ಯ ಕಾರ್ಯನಿರ್ಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ.ಕೊಡವೂರ್ ಅಧ್ಯಕ್ಷತೆ ವಹಿಸಿದ್ದರು.
ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆ ವತಿಯಿಂದ ಕಾಮನ್‌ವೆಲ್ತ್ ವೇಯ್ಟಲಿಫ್ಟಿಂಗ್ ಪದಕ ವಿಜೇತ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಗುರುರಾಜ್ ಪೂಜಾರಿ ಹಾಗೂ ರಮೇಶ್.ಎಚ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಹಿತೈಷಿಗಳಾದ ತ್ರಿವಿಕ್ರಮ ಕಿಣಿ ಹಾಗೂ ದೇವೇಂದ್ರ ನಾಯಕ್ ಹಾಗೂ ಉಪಪ್ರಾಂಶುಪಾಲ ಸಾಹಿತ್ಯ ಮತ್ತು ಉಷಾ ರಾವ್ ಯು, ಶೈಕ್ಷಣಿಕ ವ್ಯವಹಾರಗಳ ಡೀನ್ ಡಾ,ಮಿಥುನ್ ಯು, ವಿದ್ಯಾರ್ಥಿ ವ್ಯವಹಾರಗಳ ಡೀನ್ ಶಕುಂತಲಾ ಎಂ.ಸುವರ್ಣ, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿ ಮುಖ್ಯಸ್ಥ ಸಂದೀಪ, ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆ, ಅರುಣ್ ಕುಮಾರ್, ಕಿರಣ್, ರೇಷ್ಮಾ ಸಾಲಿಸ್ ಉಪಸ್ಥಿತರಿದ್ದರು.
ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಮೌಲ್ಯಎಚ್. ಪ್ರಾರ್ಥಿಸಿದರು. ದೈ.ಶಿ.ನಿರ್ದೇಶಕಿ ಸೌಜನ್ಯ ಹೆಗ್ಡೆ ವಂದಿಸಿದರು. ಹರ್ಷಿಕಾ ಪ್ರತಿಜ್ಞಾವಿಧಿ ಬೋಧಿಸಿದರು.