ಮಾದಕ ಜಾಲದಲ್ಲಿ ನರಳುತ್ತಿರುವ ಯುವಕರು

SRP_26-01jpj
Published on

ಶ್ರೀರಂಗಪಟ್ಟಣ: ಮಾದಕ ವಸ್ತುಗಳಿಗೆ ವಿದ್ಯಾವಂತ ಯುವ ಸಮೂಹ ಮಾರು ಹೋಗದೆ ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.


ತಾಲೂಕಿನ ಎಂ.ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್, ವಿಜ್ಞಾನ ಸಂಘ ಹಾಗೂ ತಾಲೂಕು ಆರೋಗ್ಯ ಇಲಾಖೆ ಮತ್ತು ಕೆ.ಶೆಟ್ಟಹಳ್ಳಿ ಆಯುಷ್ಮಾನ್ ಆರೋಗ್ಯ ಮಂದಿರ ಸಹಯೋಗದಲ್ಲಿ ಆಯೋಜಿಸಿದ್ದ ಗುರುವಾರ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಕುತೂಹಲಕ್ಕಾಗಿಯೂ ಯಾರೊಬ್ಬರೂ ಮಾದಕ ವಸ್ತುಗಳನ್ನು ಬಳಸಬಾರದು. ದೇಶದ ಯುವ ಜನತೆ ಮಾದಕ ವ್ಯಸನ ಜಾಲದಲ್ಲಿ ಸಿಕ್ಕಿ ನರಳುತ್ತಿದೆ. ನಶೆ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡೋಣ ಎಂದು ತಿಳಿಸಿದರು.


ಮುಖ್ಯ ಶಿಕ್ಷಕ ಎನ್.ಗೋಪಾಲಕೃಷ್ಣ ಮಾತನಾಡಿ, ಸದೃಢ ರಾಷ್ಟ್ರವನ್ನು ಕಟ್ಟಲು ವಿದ್ಯಾರ್ಥಿಗಳು, ಯುವಕರು ಮುಂದೆ ಬರಬೇಕು. ಇಂತಹ ದುಷ್ಟ ಮಾದಕ ವಸ್ತುಗಳಿಂದ ಜೀವನದುದ್ದಕ್ಕೂ ದೂರವಿರಬೇಕು ಎಂದರು.


ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಪಿ.ಪಣೀಂದ್ರ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ಆನಂದ, ದೊಡ್ಡರಸಯ್ಯ, ಸುವರ್ಣಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪ್ರೇಮಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net