ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಯೋಗೇಶ್ವರ್

Yogeshwara meeting
Published on

ಚನ್ನಪಟ್ಟಣ

ಶಾಸಕ ಸಿ.ಪಿ.ಯೋಗೇಶ್ವರ್ ಸೋಮವಾರ ಬೇವೂರು ಜಿಪಂ ವ್ಯಾಪ್ತಿಯ ವಿವಿಧ ಗ್ರಾಪಂಗಳಲ್ಲಿ ಇ ಸ್ವತ್ತು ಆಂದೋಲನ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸಭೆ ನಡೆಸಿದರು. ಸಭೆಯಲ್ಲಿ ಕೆಲ ಅಧಿಕಾರಿಗಳಿಗೆ ಶಾಸಕರು ಬಿಸಿ ಮುಟ್ಟಿಸುವ ಕೆಲಸ ಮ

ತಿಟ್ಟಮಾರನಹಳ್ಳಿ, ಮೈಲನಾಯಕ್ಕನಹಳ್ಳಿ, ಎಂ.ಬಿ.ಹಳ್ಳಿ ಹಾಗೂ ಎಚ್.ಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಭೆ ನಡೆಯಿತು. ಬಹುತೇಕ ಗ್ರಾಪಂಗಳಲ್ಲಿ ಇ‌ ಖಾತೆ, ಕಂದಾಯ ಸೇರಿದಂತೆ ಗ್ರಾಮಗಳ ಮೂಲಭೂತ ಸವಲತ್ತುಗಳ ಬಗ್ಗೆ ದೂರುಗಳು ಕೇಳಿಬಂದವು.

ಫೋನ್ ನಲ್ಲೇ ತರಾಟೆ!

ತಿಟ್ಟಮಾರನಹಳ್ಳಿ ಗ್ರಾಮದ ಸಭೆಯಲ್ಲಿ ಕೆಲವರು ಗ್ರಾಮಾಂತರ ಪಿಎಸ್ ಐ ಲಿಯಾಕತ್ ವಿರುದ್ಧ ಶಾಸಕರಿಗೆ ದೂರು ಸಲ್ಲಿಸಿದರು. ಆ ಅಧಿಕಾರಿ ಹಣ ಕೊಟ್ಟವರ ಪರವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಹಣ ಪಡೆದುಕೊಂಡು ಒಬ್ಬರ ಪರವಾಗಿ ಸಹಾಯ ಮಾಡಿದ್ದಾರೆ ಎಂದು ಗಂಭೀರವಾಗಿ ದೂರಿದರು. ಇದರೊಂದಿಗೆ, ಗ್ರಾಮದ ಕೆರೆಏರಿ ಮೇಲೆ ಅಳವಡಿಸಿರುವ ತಡೆಗೋಡೆಯನ್ನು ಕಳ್ಳರು ಕದಿಯುತ್ತಿದ್ದಾರೆ. ಈ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಿಎಸ್ಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಪಿಎಸ್ ಐ ಲಿಯಾಕತ್ ರವರಿಗೆ ದೂರವಾಣಿ ಕರೆ ಮಾಡಿದ ಶಾಸಕರು, ಎಲ್ಲರ ಎದುರು ಅಧಿಕಾರಿಯನ್ನು ತೀವ್ರ ತರಾಟೆಗೆ ಪಡೆದರು. ನಿನ್ನ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಸಾರ್ವಜನಿಕ ವಸ್ತುಗಳನ್ನು ಕದ್ದವರನ್ನು ಕೂಡಲೇ ಕಂಡುಹಿಡಿದು, ಅವರಿಂದ ರಿಕವರಿ ಮಾಡಿ. ಯಾವುದೇ ಸ್ಟೇ ಇರುವ ಜಮೀನಿಗೆ ಬೇಲಿಹಾಕಿಸುವುದಲ್ಲ. ರಿಯಲ್ ಎಸ್ಟೇಟ್ ಯಾಕಣ್ಣ ನಿನಗೆ? ಎಂದು ಕಿಡಿಕಾರಿದರು.

ಜಿಪಂ ಎಇಇ ಜೊತೆ ವಾಗ್ವಾದ!

ಜಿಪಂ ಎಇಇ ಶಂಕರಪ್ಪ ಹಾಗೂ ಶಾಸಕ ಯೋಗೇಶ್ವರ್ ನಡುವೆ ಸಭೆಯಲ್ಲಿ ವಾಗ್ವಾದ ನಡೆದದ್ದು ಕಂಡುಬಂದಿತು.‌ ತಿಟ್ಟಮಾರನಹಳ್ಳಿ ಸಭೆಯಲ್ಲಿ ಗ್ರಾಪಂನಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರವನ್ನು ಶಾಸಕರು ಕೇಳಿದರು. ಇದೇವೇಳೆ ಜಿಪಂ ವತಿಯಿಂದ ಸಿದ್ದಪಡಿಸಿರುವ ಕಾಮಗಾರಿಗಳ ಪಟ್ಟಿ ಹಾಗೂ ಟೆಂಡರ್ ಪ್ರಕ್ರಿಯೆ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಹಲವಾರು ವರ್ಷಗಳಿಂದ ಜಿಪಂ ಹಾಗೂ ತಾಪಂ ಆಡಳಿತವಿಲ್ಲ‌‌. ಇದರಿಂದ ನೀವು ಆಡಿದ್ದೇ ಆಟವಾಗಿದೆ. ಯಾವ ಮಾನದಂಡದ ಆಧಾರದಲ್ಲಿ ಟೆಂಡರ್ ಪ್ರಕ್ರಿಯೆ ಮಾಡಿದ್ದೀರಾ.., ನಿಮಗೆ ಬೇಕಾದವರಿಗೆ ಕೆಲಸ ಕೊಡುತ್ತೀರಾ.., ಎಂದು ತರಾಟೆಗೆ ಪಡೆದರು. ಇದಕ್ಕೆ ಎಇಇ ಶಂಕರಪ್ಪ ಪ್ರತಿಕ್ರಿಯಿಸಿ, ನಿಯಮಬದ್ಧವಾಗಿ ಕೆಲಸ ಮಾಡಲಾಗಿದೆ. ಯಾರಾದರೂ ನನ್ನ ಸಂಬಂಧಿಕರಿಗೆ ಕೆಲಸ ಕೊಟ್ಟಿದ್ದೀನಾ ಎಂದು ಉತ್ತರಿಸಿದರು. ಈ ವಿಚಾರವಾಗಿ ಇಬ್ಬರ ನಡುವೆ ಕೆಲಕಾಲ ಚರ್ಚೆ ನಡೆಯಿತು. ತಾಪಂ ಇಒ ಸಂದೀಪ್ ಮಧ್ಯಪ್ರವೇಶಿಸಿ ಚರ್ಚೆಯನ್ನು ತಿಳಿಗೊಳಿಸಿದರು.

ಇದರೊಂದಿಗೆ, ಬಹುತೇಕ ಸಭೆಗಳಲ್ಲಿ ಜಲಜೀವನ್ ಯೋಜನೆಯ ಅಧ್ಚಾನದ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದರು. ಗ್ರಾಪಂ ಪಿಡಿಒಗಳು ಸರಿಯಾದ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿದ್ದವು. ಸಣ್ಣನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆಯೂ ಸಭೆಗಳಲ್ಲಿ ಚರ್ಚೆ ನಡೆಯಿತು.

ಸಭೆಗಳಲ್ಲಿ ತಾಪಂ ಇಒ ಸಂದೀಪ್, ಸೇರಿದಂತೆ ಎಲ್ಲಾ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ‌ಪಿಡಿಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net