ಅಧಿಕಾರಿಗಳ ವಿರುದ್ಧ ಯೋಗೇಶ್ವರ್ ಗರಂ

img_3346-1.jpg
Published on

ಚನ್ನಪಟ್ಟಣ:

ಇ ಖಾತಾ ಆಂದೋಲನ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸಭೆಯಲ್ಲಿ ಭಾಗವಹಿಸದೇ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಪಾರಸ್ಸು ಮಾಡಿ ಎಂದು ತಾಪಂ ಇಒ ಸಂದೀಪ್ ಗೆ ಶಾಸಕ‌ ಸಿ.ಪಿ.ಯೋಗೇಶ್ವರ್ ಕಟ್ಟುನಿಟ್ಟಿನ ಆದೇಶ ನೀಡಿದರು.

ತಾಲೂಕಿನ ನೀಲಸಂದ್ರ ಗ್ರಾಪಂನಲ್ಲಿ ನಡೆದ ಇ ಖಾತಾ ಆಂದೋಲನ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಗ್ರಾಪಂ ಮಟ್ಟದಲ್ಲಿ ಸಭೆಗಳನ್ನು ನಡೆಸುತ್ತಿದ್ದೇವೆ. ಜನಸಾಮಾನ್ಯರ ಅಹವಾಲು ಆಲಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಕೆಲ ಗ್ರಾಪಂ ಸಿಬ್ಬಂದಿಗಳು ಸಹ ಗೈರಾಗುತ್ತಿರುವುದು ಕಂಡು ಬರುತ್ತಿದೆ. ಈಗಾಗಲೇ ನಡೆದಿರುವ ಗ್ರಾಪಂಗಳ ಸಭೆಯಲ್ಲಿ ಭಾಗವಹಿಸದಿರುವ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ, ಅವರುಗಳ ವಿರುದ್ಧ ಶಿಸ್ತುಕ್ತಮಕ್ಕೆ ಶಿಪಾರಸ್ಸು ಮಾಡಿ ಎಂದು ಆದೇಶ ನೀಡಿದರು.

ಫೋನಿನಲ್ಲೇ ತರಾಟೆ!

ನೀಲಸಂದ್ರ ಗ್ರಾಪಂ ಸಭೆಯಲ್ಲಿ ಸಮಾಜ ಕಲ್ಯಾಣ ಅಭಿವೃದ್ಧಿ ಇಲಾಖೆ ವಿರುದ್ಧ ದೂರೊಂದು ಕೇಳಿಬಂದಿತು. ಈ ಬಗ್ಗೆ ವಿಚಾರಣೆ ಮಾಡಲು ಇಲಾಖೆಯ ಅಧಿಕಾರಿಗಳನ್ನು ಕರೆದ್ದಾಗ ಸಭೆಯಲ್ಲಿ ಯಾರು ಉಪಸ್ಥಿತ ಇರಲಿಲ್ಲ. ಈ ವೇಳೆ ಇಲಾಖೆಯ ಅಧಿಕಾರಿ ಸರೋಜಮ್ಮ ಎಂಬುವವರಿಗೆ ದೂರವಾಣಿ ಕರೆಮಾಡಿ ಶಾಸಕ ಯೋಗೇಶ್ವರ್ ತರಾಟೆಗೆ ತೆಗೆದುಕೊಂಡರು. ನಾವಿಲ್ಲಿ ಕೋತಿ ಆಡಿಸೋಕೆ ಅಥವಾ ಆಟ ಆಡಲು ಬಂದಿಲ್ಲ. ಸಭೆಗೆ ನೀವು ಬಂದಿಲ್ಲ ಅಥವಾ ನಿಮ್ಮ ಅಧಿಕಾರಿಗಳು ಸಹ ಇಲ್ಲ ಎಂದರೆ ಏನಾರ್ಥ? ಸಾರ್ವಜನಿಕ ಸೇವೆಯಲ್ಲಿ ಉಢಾಪೆ ಅಥವಾ ನಿರ್ಲಕ್ಷ್ಯ ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದರು. ಇದರೊಂದಿಗೆ, ಇವರ ವಿರುದ್ಧ ಕ್ರಮಜರುಗಿಸಿ ಎಂದು ತಾಪಂ ಇಒ ಗೆ ಸೂಚನೆ ನೀಡಿದರು.

ಸಭೆಗೂ ಮುನ್ನ ನೀಲಸಂದ್ರ ಗ್ರಾಪಂನಲ್ಲಿರುವ ಹೈಟೆಕ್ ಗ್ರಂಥಾಲಯಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಇದರೊಂದಿಗೆ, ನೀಲಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಶೌಚಾಲಯ ಕಟ್ಟಡವನ್ನು ಲೋಕಾರ್ಪಣೆ‌ ಮಾಡಿದರು. ತದನಂತರ, ತಗಚಗೆರೆ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಅನುದಾನದಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆಯನ್ನು  ನೇರವೇರಿಸಿದರು. ನೀಲಸಂದ್ರ, ತಗಚಗೆರೆ, ವಂದಾರಗುಪ್ಪೆ ಹಾಗೂ ರಾಂಪುರ ಗ್ರಾಪಂ ವ್ಯಾಪ್ತಿಯ ಸಭೆಗಳು ನಡೆದವು.

ಕಾರ್ಯಕ್ರಮದಲ್ಲಿ ತಾಪಂ ಇಒ ಸಂದೀಪ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬೋರ್ ವೆಲ್ ರಂಗನಾಥ್, ನೀಲಸಂದ್ರ ಗ್ರಾಪಂ ಅಧ್ಯಕ್ಷ ಬಿಳಿಯಪ್ಪ ಸೇರಿದಂತೆ ಹಲವರು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net