ಯೋಗೇಶ್ವರ್ ಹರಕೆಯ ಕುರಿ - ಆರ್ ಅಶೋಕ ವ್ಯಂಗ್ಯ

25-10-rama- bjp press meet
Published on

ರಾಮನಗರ: ತಮ್ಮ ಸ್ವಾರ್ಥಕ್ಕಾಗಿಯೇ ಅಧಿಕಾರದಲ್ಲಿರುವ ಪಕ್ಷಕ್ಕೆ ಪಕ್ಷಾಂತರ ಮಾಡುವ ಸಿ.ಪಿ. ಯೋಗೇಶ್ವರ್​, ಈಗ ಕಾಂಗ್ರೆಸ್​ ಸೇರುವ ಮೂಲಕ ಹರಕೆಯ ಕುರಿಯಾಗಿದ್ದಾರೆ ಎಂದು ಬಿಜೆಪಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್​. ಅಶೋಕ್​ ವಾಗ್ದಾಳಿ ನಡೆಸಿದರು.

ನಗರ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದ, ಕಾಂಗ್ರೆಸ್​ನಲ್ಲಿ ಮೂರನೇ ಸಾಲಿಗೆ ಹೋಗಿದ್ದಾರೆ. ಚುನಾವಣೆ ನಂತರ ಯಾವ ಸಾಲಿಗೆ ಹೋಗಲಿದ್ದಾರೆ ನೋಡಬೇಕು ಎಂದು ವ್ಯಂಗವಾಡಿದರು.

ಯೋಗೇಶ್ವರ್​ ಪಾಂತರ ವೈಯಕ್ತಿಕ ಅನುಕೂಲಕ್ಕಾಗಿ ಹೊರತು, ಕ್ಷೇತ್ರದ ಅಭಿವೃದ್ಧಿಗೆ ಅಲ್ಲ ಎಂದು ಟೀಕಿಸಿದರು. ಯೋಗೇಶ್ವರ್​ ಅವರಿಗೆ ಟಿಕೆಟ್​ ಕೊಡಿಸುವ ಸಲುವಾಗಿ ನಾನು, ಡಾ. ಸಿ.ಎನ್​. ಅಶ್ವತ್ಥ ನಾರಾಯಣ ಸೇರಿದಂತೆ ಬಿಜೆಪಿ ನಾಯಕರು ನಿರಂತರವಾಗಿ ಪ್ರಯತ್ನ ಮಾಡಿದೆವು. ಕಡೆಗೆ ಜೆಡಿಎಸ್​ ಟಿಕೆಟ್​ ನೀಡಲು ಎಚ್​.ಡಿ. ಕುಮಾರಸ್ವಾಮಿ ಒಪ್ಪಿದರು. ಅದನ್ನೂ ನಿರಾಕರಿಸಿದಾಗ ಬಿಜೆಪಿಯಿಂದಲೇ ಕಣಕ್ಕಿಳಿಸಲು ಮುಂದಾದರು.

ಅಷ್ಟೊತ್ತಿಗಾಗಲೇ ಸಿಪಿವೈ ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡಿ, ರಾತ್ರೋರಾತ್ರಿ ಆ ಪಕ್ಷ ಸೇರಿ ಬಿಜೆಪಿಗೆ ದ್ರೋಹ ಬಗೆದರು. ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್​ ಕುಮಾರಸ್ವಾಮಿ ಕಣಕ್ಕಿಳಿದಿರುವುದರಿಂದ ಕಣದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ನಿಖಿಲ್​ ಗೆಲುವಿಗೆ ಎರಡೂ ಪಕ್ಷಗಳ ನಾಯಕರು ಪಣ ತೊಟ್ಟಿದ್ದು, ಅವರ ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಡಿಸಿಎಂ ಡಾ. ಸಿ.ಎನ್​. ಅಶ್ವತ್ಥ ನಾರಾಯಣ ಮಾತನಾಡಿ, ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಹೆಚ್ಚಿದೆ. ಚನ್ನಪಟ್ಟಣದ ಜನ ಕಾಂಗ್ರೆಸ್​ ಅನ್ನು ಯಾವ ಕಾರಣಕ್ಕೂ ನಂಬಿಲ್ಲ. ಮುಂದೆಯೂ ನಂಬುವುದಿಲ್ಲ. ಪಕ್ಷ ತೊರೆದು ಕಾಂಗ್ರೆಸ್​ನಿಂದ ಸ್ಪರ್ಧಿಸಿರುವ ಯೋಗೇಶ್ವರ್​ ಸೋಲಲಿದ್ದಾರೆ ಎಂದು ಹೇಳಿದರು.

ನಾನು ಭಗೀರಥ

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಚನ್ನಪಟ್ಟಣದಲ್ಲಿ ಏತ ನೀರಾವರಿ ಯೋಜನೆಗೆ 150 ಕೋಟಿ ರೂ ಮಂಜೂರು ಮಾಡಿದ್ದೆ. ಇದರಿಂದಾಗಿಯೇ ಇಲ್ಲಿನ ಕೆರೆಗಳು ತುಂಬಿವೆ. ಆದರೆ ಯೋಗೇಶ್ವರ್​ ತಾನು ಕೆರೆಗಳನ್ನು ತುಂಬಿಸಿದೆ ಎಂದು ಭಗೀರಥ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಅವರಲ್ಲ ನಾನು ಭಗೀರಥ, ಬಿಜೆಪಿ ಪಕ್ಷ ಭಗೀರಥ. ಚನ್ನಪಟ್ಟಣಕ್ಕೆ ನೀರು ತುಂಬಿಸುವ ಯೋಜನೆ ಕ್ರೆಡಿಟ್​ ನನಗೇ ಬರಬೇಕು.

ಆದರೆ, ಯೋಗೇಶ್ವರ್​ ಅದರ ಕ್ರೆಡಿಟ್​ ತೆಗೆದುಕೊಂಡು ಭಗೀರಥ ಎಂದು ಹೇಳಿಕೊಂಡು ಚುನಾವಣೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಹಾಗೆ ಹೇಳಿಕೊಳ್ಳದೆ ಚುನಾವಣೆ ಎದುರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸವಾಲು ಹಾಕಿದರು.

ಈ ಉಪ ಚುನಾವಣೆ ನಮಗೆ ದೊಡ್ಡ ಸವಾಲು. ಇಲ್ಲಿ ವ್ಯಕ್ತಿಯೇ ಪಕ್ಷ ಎಂದು ಬಿಂಬಿಸಿಕೊಂಡು ಪ್ರತಿ ಸಲ ಸ್ಚಾರ್ಥಕ್ಕಾಗಿ ಪಕ್ಷಾಂತರ ಮಾಡಿದ ಯೋಗೇಶ್ವರ್​ ರಾಜಕಾರಣದಲ್ಲಿ ಇರಬೇಕೊ ಬೇಡವೊ ಎಂದು ನಿರ್ಧರಿಸುವ ಚುನಾವಣೆ ಇದಾಗಿದೆ. ಆರನೇ ಸಲ ಪಕ್ಷಾಂತರ ಮಾಡಿರುವ ಯೋಗೇಶ್ವರ್​ ನಡೆಯು ರಾಜಕೀಯ ಪಕ್ಷಗಳಿಗೂ ದೊಡ್ಡ ಪಾಠ. ನಾವು ಈ ಭಾಗದಲ್ಲಿ ಅವರ ಮೇಲೆ ಅವಲಂಬಿನೆಯಾಗಿದ್ದು ನಿಜ. ಈಗ ಅವರು ಮಾಡಿರುವ ದ್ರೋಹಕ್ಕೆ ಜನರು ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net