ಆನೆ ಹಾವಳಿ ಅಧಿಕಾರಿಗಳ ಸಭೆ ನಡೆಸಿದ ಯೋಗೇಶ್ವರ್

img_3318-1.jpg
Published on

ಚನ್ನಪಟ್ಟಣ

ಕಾಡಾನೆಗಳ ಹಾವಳಿ ಸಂಬಂಧವಾಗಿ ಶಾಸಕ ಸಿ.ಪಿ.ಯೋಗೇಶ್ವರ್ ಶನಿವಾರ ನಗರದ ಪ್ರವಾಸಿಮಂದಿರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರೈತರ ಸಭೆ ನಡೆಸಿದರು.

ಸಭೆಯಲ್ಲಿ ಅರಣ್ಯ ಇಲಾಖೆಯ ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್ ಪುಟ್ಟಮ್ಮ, ತಾಲೂಕು ವಲಯ ಅರಣ್ಯಾಧಿಕಾರಿ ಮಲ್ಲೇಶ್ ಸೇರಿದಂತೆ ಹಲವಾರು ಅಧಿಕಾರಿಗಳು ಜೊತೆಗೆ, ರೈತ‌ಮುಖಂಡ ಸಿ.ಪುಟ್ಟಸ್ವಾಮಿ, ಮುಖಂಡರಾದ ಡಿ‌.ಕೆ.ಕಾಂತರಾಜು ಸೇರಿದಂತೆ ಹಲವಾರು ಮುಖಂಡರು ಸಹ ಉಪಸ್ಥಿತರಿದ್ದರು. ಸಭೆಯಲ್ಲಿ ಕಾಡಾನೆ ಸಮಸ್ಯೆಯ ಕುರಿತಾಗಿ ಶಾಸಕರು ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದರು. ಈ ವೇಳೆ ಹಲವಾರು ರೈತರು ಕಾಡಾನೆಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಅವಲತ್ತುಕೊಂಡರು.

ಸಭೆಯ ಆರಂಭದಲ್ಲಿ ಅರಣ್ಯ ಇಲಾಖೆ ಡಿಸಿಎಫ್ ರಾಮಕೃಷ್ಣಪ್ಪ, ಕಾಡಾನೆಗಳ ಓಡಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗೂ ಇಲಾಖೆಗೆ ಬೇಕಾಗಿರುವ ಅಗತ್ಯ ಸವಲತ್ತುಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಶಾಸಕ ಸಿ.ಪಿ.ಯೋಗೇಶ್ವರ್, ಕಾಡಾನೆಗಳಿಂದ ನಷ್ಟ ಅನುಭವಿಸುತ್ತಿರುವ ನಮ್ಮ ರೈತರ ಅಕ್ರಂದನ ಕೇಳಲು ಸಾಧ್ಯವಾಗುತ್ತಿಲ್ಲ. ಇಲಾಖೆ ಅಧಿಕಾರಿಗಳು ಈ ವಿಚಾರದಲ್ಲಿ ಏನಾದರೂ ಕ್ರಮವಹಿಸಲೇಬೇಕು. ಈ ಸಮಸ್ಯೆ ಬಗ್ಗೆ ಮೊದಲು ನೀವು ಕ್ಲಾರಿಟಿ ಇಟ್ಟುಕೊಳ್ಳಿ. ಓಡಿಸುವ ಜೊತೆಗೆ, ಅವುಗಳು ಇತ್ತ ಬಾರದಂತೆ ಯಾವ ಕ್ರಮ ಕೈಗೊಂಡಿದ್ದೀರಿ ಅದು ಮುಖ್ಯವಾಗುತ್ತದೆ. ಸರ್ಕಾರದಿಂದ ಯಾವ ಅನುಕೂಲ ಬೇಕು ನಮ್ಮ ಬಳಿ ಹಂಚಿಕೊಳ್ಳಿ. ನಾವು ಕೊಡಿಸಲು ಪ್ರಯತ್ನಿಸುತ್ತೇವೆ. ಆದರೆ, ಈ ಆನೆಗಳ ಕಾಟಕ್ಕೆ ನಮ್ಮ ರೈತರಿಗೆ ಮುಕ್ತಿಕೊಡಿ ಎಂದರು.

ಈ ವೇಳೆ ಅಧಿಕಾರಿಗಳು, ಈಗಾಗಲೇ ಹಲವಾರು ಆನೆಗಳನ್ನು ಓಡಿಸಲಾಗಿದೆ. ಎರಡು ಪುಂಡಾನೆಗಳನ್ನು ಸೆರೆಹಿಡಿದ ನಂತರ ಉಳಿದ ಆನೆಗಳು ಚದುರಿ ಪುಂಡಾಟ ನಡೆಸುತ್ತಿದ್ದಾವೆ. ಅವುಗಳು ಈ ಜಾಗವನ್ನು‌ ಬಿಟ್ಟು ಹೋಗುವ ಆನೆಗಳಲ್ಲ. ಬ್ಯಾರಿಕೇಡ್ ಗಳನ್ನು ಹತ್ತಿ ಬರುತ್ತಿದ್ದಾವೆ. ಆನೆಗಳನ್ನು ಓಡಿಸಲು ಡ್ರೋನ್ ಟೀಂ ಅವಶ್ಯಕವಾಗಿದ್ದು, ಜೊತೆಗೆ ವಾಹನಗಳ ಅವಶ್ಯಕತೆಯೂ ಇದೆ. ಎರಡು ಇಟಿಎಫ್ ತಂಡ, ಒ ಡ್ರೋನ್ ಗಳು ಹಾಗೂ ವಾಹನಗಳ ಸವಲತ್ತು ದೊರಕಿದರೆ ಕಾರ್ಯಾಚರಣೆಗೆ ಸಹಕಾರವಾಗಲಿದೆ ಎಂದು ಶಾಸಕರ ಗಮನಸೆಳೆದರು.

ಸಚಿವರ ಭೇಟಿ ನಿಗಧಿ!!

ಕಾಡಾನೆಗಳ ಸಮಸ್ಯೆ ನಿವಾರಿಸಲು ಅರಣ್ಯ ಸಚಿವರು ಸಹ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರ ಭೇಟಿಯ ದಿನಾಂಕ ನಿಗಧಿಪಡಿಸುತ್ತೇನೆ. ಅಷ್ಟರಲ್ಲಿ ಆಗಬೇಕಾದ ಕೆಲಸಗಳು ಹಾಗೂ ಅನುದಾನದ ಬಗ್ಗೆ ಪಟ್ಟಿ ಮಾಡಿ. ಅವರಿಗೆ ಸಮಸ್ಯೆಯ ಅಳವನ್ನು ಮನದಟ್ಟು ಮಾಡಿಸುವ ಕೆಲಸ ಮಾಡೋಣ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಇದೆವೇಳೆ ಸ್ಥಳದಲ್ಲಿಯೇ ಅರಣ್ಯ ಸಚಿವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಭೇಟಿಯ ದಿನಾಂಕ ನೀಡುವಂತೆ ಮನವಿ ಮಾಡಿದರು.

ರೈತರ ಆಕ್ರೋಶ!!

ಸಭೆಯಲ್ಲಿ ಉಪಸ್ಥಿತರಿದ್ದ ಹಲವಾರು ರೈತರು ಕಾಡಾನೆಗಳಿಂದ ತಮಗೆ ಆಗುತ್ತಿರುವ ಸಮಸ್ಯೆಗಳನ್ನು ತೋಡಿಕೊಂಡರು. ಆನೆಗಳ ಹಾವಳಿಗಳಿಂದ ಈಗಾಗಲೇ ನೂರಾರು ಎಕರೆ ಜಾಗದಲ್ಲಿ ವ್ಯವಸಾಯ ಬಿಡಲಾಗಿದೆ. ಲಕ್ಷಾಂತರ ರೂ ಖರ್ಚು ಮಾಡಿ ಬೆಳೆದ ನಮ್ಮ ಬೆಳೆಗಳು ನಾಶವಾಗುತ್ತಿದ್ದಾವೆ. ಇಲಾಖೆಯ ಅಧಿಕಾರಿಗಳು ಬೆಳೆನಷ್ಟವಾಗಿದೆ ಎಂದರೆ ಸ್ಥಳಕ್ಕೂ ಬಂದು ನೋಡುವುದಿಲ್ಲ‌. ನಮ್ಮ ಜಮೀನಿನ ಪತ್ರ ತೆಗೆದುಕೊಂದು ನಮ್ಮ ಜಮೀನು ಭೋಗ್ಯ ಹಾಕಿಕೊಳ್ಳಿ ಎಂದು ಆಕ್ರೋಶವ್ಯಕ್ತಪಡಿಸಿದರು.

ಶಾಶ್ವತ ಪರಿಹಾರ ಹುಡುಕುತ್ತೇವೆ!

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ಕಾಡಾನೆಗಳ ತೊಂದರೆ ನಿವಾರಿಸಲು ಮೂರನೇ ಸಭೆ ಇದಾಗಿದೆ. ಕಾಡಾನೆಗಳ ಹಾವಳಿ ತಡೆಗಟ್ಟಲು ಹಲವಾರು ಕೆಲಸಗಳಾಗಬೇಕಿವೆ. ಇದಕ್ಕೆ ಸಂಪನ್ಮೂಲದ ಅವಶ್ಯಕತೆಯೂ ಇದೆ‌. ಈ ಹಿನ್ನೆಲೆಯಲ್ಲಿ ತಾಲೂಕಿಗೆ ಅರಣ್ಯ ಸಚಿವರನ್ನು ಕರೆತರುವ ಪ್ರಯತ್ನ ನಡೆಸುತ್ತಿದ್ದೇವೆ. ಶಾಶ್ವತವಾದ ಹಾಗೂ ವೈಜ್ಞಾನಿಕ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತೇವೆ ಎಂದರು.

ಅರಣ್ಯ ಸಚಿವರ ಗಮನಕ್ಕೆ ತರಲು ಈಗಾಗಲೇ ಸಾಕಷ್ಟು ಪಟ್ಟಿ ಮಾಡಿದ್ದೇವೆ. ಕೇವಲ ಆನೆ ಅಷ್ಟೇ ಅಲ್ಲದೇ ಚಿರತೆ, ನವಿಲು, ಕರಡಿ ಸೇರಿದಂತೆ ವನ್ಯಜೀವಿಗಳ ಉಪಟಳ ಹೆಚ್ಚಾಗಿದೆ. ಕೇವಲ ತಾಲೂಕಷ್ಟೇ ಅಲ್ಲದೇ ಕನಕಪುರದಲ್ಲೂ ಈ ಸಮಸ್ಯೆ ಹೆಚ್ಚಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ರವರ ಸಹಕಾರದಿಂದ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ನೀಡುವ ಕೆಲಸ ಮಾಡುತ್ತೇವೆ ಎಂದರು.

ಮುತ್ತತ್ತಿ ಬಳಿ ಆನೆಕ್ಯಾಂಪ್ ಆದರೆ, ಸಾಕಷ್ಟು ಅನುಕೂಲವಾಗಲಿದೆ. ಪ್ರವಾಸಿ ತಾಣ ಅಭಿವೃದ್ಧಿಯಾಗುವ ಜೊತೆಗೆ, ಕಾಡಾನೆಗಳನ್ನು ಹಿಡಿದಿಡಲು ಸಾಕಷ್ಟು ಅನುಕೂಲವಾಗಲಿದೆ‌. ಈ ಹಿನ್ನೆಲೆಯಲ್ಲಿ ಈ ಯೋಜನೆಯ ಬಗ್ಗೆಯೂ ಡಿಸಿಎಂ ಹಾಗೂ ಅರಣ್ಯ ಸಚಿವರ ಗಮನ ಸೆಳೆಯುವುದಾಗಿ ಯೋಗೇಶ್ವರ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net