

ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯ ಯೋಗೇಶ್ ಗೌಡ ಗೌಡರ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಮತ್ತು ಇತರ ಇಬ್ಬರ ವಿರುದ್ಧ ಸಿಬಿಐ ಮಂಗಳವಾರ ಪೂರಕ ಆರೋಪ ಪಟ್ಟಿ ದಾಖಲಿಸಿದೆ.
ಧಾರವಾಡದ ವಿಶೇಷ ಕೋರ್ಟ್‌ನಲ್ಲಿ ಶನಿವಾರವೇ ಈ ಆರೋಪಪಟ್ಟಿಯನ್ನು ಸಲ್ಲಿಸಲಾಗಿದ್ದು, ಅದರಲ್ಲಿ ಚಂದ್ರಶೇಖರ ಇಂಡಿ ಮತ್ತು ಶಿವಾನಂದ ಬಿರಾದಾರ್ ಅವರ ಹೆಸರುಗಳನ್ನೂ ನಮೂದಿಸಲಾಗಿದೆ. ಇವರೆಲ್ಲರೂ ಸೇರಿ ಯೋಗೇಶ್ ಗೌಡ ಕೊಲೆಗೆ ಹೇಗೆ ಸಂಚು ರೂಪಿಸಿದರು ಎಂಬುದನ್ನು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ಸಿಬಿಐ ಮಂಗಳವಾರ ನವದೆಹಲಿಯಿಂದ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಇದನ್ನೂ ಓದಿರಿ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ: ಅಪರಾಧಿಗೆ ಇಂದು ಶಿಕ್ಷೆ ವಿಧಿಸಿದ ಕೋರ್ಟ್!
ವಿನಯ್ ಕುಲಕರ್ಣಿಗೂ ಯೋಗೇಶ್ ಗೌಡಗೂ ವೈಯಕ್ತಿಕ ಹಾಗೂ ರಾಜಕೀಯ ದ್ವೇಷ ಇತ್ತು. 2016ರಲ್ಲಿ ಜಿಪಂ ಚುನಾವಣಾ ಕಣದಿಂದ ಹಿಂದೆ ಸರಿಯಲು ಯೋಗೇಶ್ ಗೌಡ ನಿರಾಕರಿಸಿದ್ದರು. ಇದರಿಂದ ಕ್ರೋಧಗೊಂಡ ವಿನಯ್ ಕುಲಕರ್ಣಿ ತನ್ನ ಸಹಚರರ ಜತೆಗೂಡಿ ಯೋಗೇಶ್ ಗೌಡ ಕೊಲೆಗೆ ಸಂಚು ರೂಪಿಸಿದ್ದರು. ಅವರ ಪೈಕಿ ಒಬ್ಬ ವ್ಯಕ್ತಿ ಕೊಲೆ ಸಂಚನ್ನು ಕಾರ್ಯಗತಗೊಳಿಸಲು ಒಪ್ಪಿಕೊಂಡ. ನಂತರ ಒಂದು ಭೂ ವ್ಯವಹಾರವನ್ನು ಸೃಷ್ಟಿಸಿ ಅದೇ ಈ ಕೃತ್ಯಕ್ಕೆ ಕಾರಣ ಎಂಬಂತೆ ಬಿಂಬಿಸಲು ಸಂಚು ರೂಪಿಸಲಾಗಿತ್ತು. ಕೃತ್ಯಕ್ಕೆ ಸಂಬಂಧಿಸಿದಂತೆ ಮೂರು ಕಂಟ್ರಿ ಮೇಡ್ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ವಿನಯ್ ಕುಲಕರ್ಣಿ ಅವರ ಸಹಚರನೊಬ್ಬ ಬೆಂಗಳೂರಿನ ಇನ್ನೊಬ್ಬ ಸಹಚರನೊಂದಿಗೆ ಸೇರಿ ಎರಡು ಬಾರಿ ಧಾರವಾಡಕ್ಕೆ ಭೇಟಿ ನೀಡಿದ್ದ. ಮೊದಲ ಸಲ ಬಂದಾಗ ದಾಂಡೇಲಿಯ ರೆಸಾರ್ಟ್ ಒಂದರಲ್ಲಿ ಅವರಿಗೆ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಎರಡನೇ ಬಾರಿ ಧಾರವಾಡಕ್ಕೆ ಬಂದಾಗ ಕೊಲೆ ಕೃತ್ಯ ಎಸಗಿ ಪರಾರಿಯಾಗಿದ್ದರು ಎಂದು ಸಿಬಿಐ ವಿವರಿಸಿದೆ. ಸ್ಥಳೀಯ ಪೊಲೀಸರ ವಿಚಾರಣೆ, ನಂತರ ಸಿಬಿಐ ವಹಿಸಿಕೊಂಡಿದ್ದು, 8 ಜನರ ಬಂಧನ, ವಿಸ್ತೃತ ತನಿಖೆ ಮುಂತಾದ ಮಾಹಿತಿಯನ್ನೂ ಸಿಬಿಐ ತನ್ನ ಪೂರಕ ಆರೋಪಪಟ್ಟಿಯಲ್ಲಿ ವಿವರಿಸಿದೆ.