

ಉಳ್ಳಾಲ: ಹನ್ನೊಂದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ತಲಪಾಡಿ ಶಾರದಾ ಯೋಗ, ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಶ್ರಯದಲ್ಲಿ ಬೀಚ್ ಬದಿ ಯೋಗ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿ ನಿರ್ದೇಶನದಂತೆ ತಣ್ಣೀರುಬಾವಿ ಬೀಚ್‌ನ ಪಾರ್ಕಿಂಗ್ ಸ್ಥಳದಲ್ಲಿ ನಡೆಯಿತು.
ಕಾಲೇಜು ಮತ್ತು ಆಸ್ಪತ್ರೆ 50 ವಿದ್ಯಾರ್ಥಿಗಳು ಹಾಗೂ 50 ಪೊಲೀಸ್ ಕಾನ್‌ಸ್ಟೆಬಲ್ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಪೊಲೀಸ್, ಪ್ರವಾಸೋದ್ಯಮ ಇಲಾಖೆ ಮತ್ತು ಮಂಗಳೂರು ಮಹಾನಗರಪಾಲಿಕೆ ಸಹಕಾರ ನೀಡಿತು. ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಕಡಲತೀರಕ್ಕೆ ಆಗಮಿಸಿದ್ದ ಸಾರ್ವಜನಿಕರನ್ನು ಆಕರ್ಷಿಸಿ ಯೋಗದ ಪ್ರಯೋಜನ ತಿಳಿಸಿದರು.
ಈ ಕಾರ್ಯಕ್ರಮ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಯಶಸ್ಸಿಗೆ ಮಹತ್ವದ ಹೆಜ್ಜೆಯಾಗಿದೆ. ಸಂಸ್ಥೆಯ ಆಡಳಿತ ಮಂಡಳಿಯ ಬೆಂಬಲ ಹಾಗೂ ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಮಹಾನಗರಪಾಲಿಕೆ ಸಹಕಾರದೊಂದಿಗೆ ಕಾರ್ಯಕ್ರಮ ಸುಗಮವಾಗಿ ನಡೆದಿದೆ. ಯೋಗವನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಿಸುವ ಸಂದೇಶ ಸಾರಿದೆ ಎಂದು ಶಾರದಾ ಯೋಗ, ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲರು ತಿಳಿಸಿದ್ದಾರೆ.