ಯೋಗ ದಿನಕ್ಕೆ ರಾಜ್ಯಾದ್ಯಂತ ‘ಯೋಗ ಸಂಗಮ’

Yoga Day
Published on

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯುಷ್ ಇಲಾಖೆಯು ಜೂ.21ರಂದು ಬೆಳಗ್ಗೆ 6ರಿಂದ 8ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ‘ಯೋಗ ಸಂಗಮ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕುರಿತು ಆರೋಗ್ಯಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಯೋಗ ದಿನದಂದು ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಹಾಗೂ ಇತರೆಡೆಗಳಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಯೋಗಾಭ್ಯಾಸ ಮಾಡಲಿದ್ದಾರೆ ಎಂದರು.

ವಿಧಾನಸೌಧದ ಆವರಣದಲ್ಲಿ ಅಂದು ಬೆಳಗ್ಗೆ ನಡೆಯಲಿರುವ ಮುಖ್ಯ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದರು, ಸಚಿವರು, ಶಾಸಕರು ಹಾಗೂ ಚಲನಚಿತ್ರ ನಟ ನಟಿಯರೂ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಯೋಗ ಪ್ರಾತ್ಯಕ್ಷಿಕೆ ನಡೆಯಲಿದ್ದು, 3 ಸಾವಿರ ಮಂದಿ ಯೋಗಾಭ್ಯಾಸ ಮಾಡಲಿದ್ದಾರೆ. ಇದೇ ಸಮಯಕ್ಕೆ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳು ಹಾಗೂ 360 ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಯೋಗಾಭ್ಯಾಸ ನಡೆಯಲಿದೆ ಎಂದು ತಿಳಿಸಿದರು.

ಯೋಗ ಮಹಾಕುಂಭ:

ಯೋಗದಿನದಂದು ಮೈಸೂರಿನಲ್ಲಿಯೂ ಬೃಹತ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಯೋಗ ಮಹಾಕುಂಭ ಶೀರ್ಷಿಕೆಯಡಿ ಮೈಸೂರು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 15 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.

ಹಸಿರು ಯೋಗ:

ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಹಸಿರು ಯೋಗ ಕಾರ್ಯಕ್ರಮದಡಿ 5 ಲಕ್ಷ ಗಿಡಗಳನ್ನು ನೆಡುವ ಸಂಕಲ್ಪ ಮಾಡಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರದೊಂದಿಗೆ ಈ ಕಾರ್ಯ ನಡೆಸಲಾಗುವುದು ಎಂದರು.

ಯೋಗ ಪಾರ್ಕ್:

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜುಲೈ ಅಂತ್ಯದವರೆಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಇದರಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಯೋಗ ಪಾರ್ಕ್ ಕಾರ್ಯಕ್ರಮದಡಿ ಬೆಂಗಳೂರು ಹಾಗೂ ಜಿಲ್ಲೆಗಳಲ್ಲಿರುವ ಉದ್ಯಾನಗಳಲ್ಲಿ ವರ್ಷಪೂರ್ತಿ ಯೋಗ ಸಂಬಂಧಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಜೂನ್ ಕೊನೆಯ ವಾರದಲ್ಲಿ ಮೈಸೂರು ವಿವಿ, ಜುಲೈ ಮೊದಲ ವಾರದಲ್ಲಿ ನಿಮ್ಹಾನ್ಸ್ ಮತ್ತು ಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಸೇರಿ ಹಲವೆಡೆ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.

ಈ ವೇಳೆ ಯೋಗ ಕುರಿತ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಆಯುಷ್ ಇಲಾಖೆ ಆಯುಕ್ತ ವಿಪಿನ್ ಸಿಂಗ್ ಇದ್ದರು.

===============

ಮೈಸೂರು ಯೋಗ ಜಿಲ್ಲೆ:

ಕರ್ನಾಟಕಕ್ಕೂ ಯೋಗಕ್ಕೂ ವಿಶೇಷ ಸಂಬಂಧವಿದೆ. ಮೈಸೂರನ್ನು ಯೋಗ ಜಿಲ್ಲೆಯೆಂದು ಘೋಷಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆದಿದೆ. ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಪ್ರತಿಯೊಂದು ಮನೆಯಲ್ಲೂ ಯೋಗಾಭ್ಯಾಸ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಇದು ಸಾಧ್ಯವಾದರೆ ಮೈಸೂರು ದೇಶದ ಪ್ರಥಮ ಯೋಗ ಜಿಲ್ಲೆ ಎಂಬ ಖ್ಯಾತಿ ಪಡೆಯಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net