

ಶ್ರೀರಂಗಪಟ್ಟಣ: ಯೋಗಾಭ್ಯಾಸ ಯೋಗ ಮತ್ತು ಯೋಗ್ಯತೆಯ ಜೀವನಕ್ಕಾಗಿ ನಮ್ಮೆಲ್ಲರ ಬದುಕಿನಲ್ಲಿ ನಿತ್ಯದ ಅಭ್ಯಾಸದ ಭಾಗವಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ, ಶ್ರೀ ತ್ರಿನೇತ್ರ ಇಂಟರ್ ನ್ಯಾಷನಲ್ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಡಿ.ಎಂ.ಎಸ್.ಚಂದ್ರವನ ಆಶ್ರಮ ಶ್ರೀರಂಗಪಟ್ಟಣ ಹಾಗೂ ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಯೋಗೋತ್ಸವ ಮತ್ತು ಗುರುಕುಲದ 4ನೇ ವರ್ಷದ ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿನದ 24 ಗಂಟೆಗಳಲ್ಲಿ ಒಂದು ಗಂಟೆ ಯೋಗಾಭ್ಯಾಸಕ್ಕೆ ಮೀಸಲಿಡುವ ಮೂಲಕ ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ಪ್ರತಿನಿತ್ಯದ ಕೆಲಸವನ್ನಾಗಿ ರೂಢಿಸಿಕೊಂಡು ಆರೋಗ್ಯ ಮಾತ್ರ ವೃದ್ಧಿಸುವುದಲ್ಲದೆ ಮಾನಸಿಕ ಮತ್ತು ದೈಹಿಕವಾಗಿ ಹೆಚ್ಚು ಸದೃಢತೆ ಹೊಂದಬಹುದು. ಯೋಗಾಭ್ಯಾಸಕ್ಕೆ ಭಾರತ ಮಾತ್ರವಲ್ಲದೆ ವಿಶ್ವದಲ್ಲೇ ಉನ್ನತ ಸ್ಥಾನದ ಮನ್ನಣೆ ದೊರೆತಿದ್ದು, ನಮ್ಮದೇ ದೇಶದಲ್ಲಿನ ಯೋಗಾಭ್ಯಾಸವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ನಮ್ಮ ಇಲಾಖೆಯಲ್ಲಿ ನಿತ್ಯ ನಾವು ನೋಡುವ ಅಪರಾಧಿಗಳು ಯೋಗಾಭ್ಯಾಸವಿಲ್ಲದೆ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವವರೇ ಆಗಿದ್ದಾರೆ. ಯೋಗಾಭ್ಯಾಸದಲ್ಲಿ ನಿರತರಾಗಿರುವವರು ವಿವಿಧ ಪ್ರಕರಣಗಳಿಗಾಗಿ ಠಾಣೆಗೆ ಬರುವುದು ತೀರಾ ಕಡಿಮೆ. ಉತ್ತಮ ಆಲೋಚನೆ, ಸದಾ ಕ್ರೀಯಾಶೀಲ ಚಟುವಟಿಕೆ, ಆರೋಗ್ಯ, ಹರ್ಷ ಮತ್ತು ಮುಖದಲ್ಲಿ ತೇಜಸ್ಸು ಹೊಂದಲು ಯೋಗಾಭ್ಯಾಸ ಮಾಡಬೇಕು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಭಾರತೀಯ ಸನಾತನ ಪರಂಪರೆಯಲ್ಲಿ ಋಷಿಮುನಿಗಳಿಂದ ಬಂದ ವಿದ್ಯೆಗಳನ್ನು ಸದಾ ಜೀವಂತ ಉಳಿಸಲು ಕಾವೇರಿ ತೀರದಲ್ಲಿ ಗುರುಕುಲ ಪದ್ಧತಿಯಲ್ಲೇ ಸಂಸ್ಕೃತ, ವೇದ, ಆಗಮ, ಜ್ಯೋತಿಷ್ಯ, ಯೋಗಶಾಸ್ತ್ರದ ವಿವಿಧ ಅಭ್ಯಾಸಗಳನ್ನು ನಡೆಸಲಾಗುತ್ತಿದ್ದು, ರೋಗ ಮುಕ್ತ ಹಾಗೂ ಮನೋಬಲದ ಹೆಚ್ಚಳದ ಮೂಲಕ ಸಮಾಜದ ಸುಧಾರಣೆಯೊಂದಿಗೆ ಆರ್ಥಿಕ, ಮಾನಸಿಕ ಮತ್ತು ದೈಹಿಕ ಸದೃಢತೆಯ ಬೆಳವಣಿಗೆಗಾಗಿ ತಾವೂ ಯೋಗವನ್ನು ಅನುಷ್ಠಾನ ಮಾಡಿ ಬೇರೆಯವರಿಗೂ ಕಲಿಸಿ, ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಅಹಲ್ಯಾ. ಎಸ್ ಜಾಥಾಕ್ಕೆ ಚಾಲನೆ ನೀಡಿದರು. ನಂತರ ಮಠದ ಆವರಣದಲ್ಲಿ ನೂರಾರು ಶಿಬಿರಾರ್ಥಿ ಯೋಗಪಟುಗಳು ಹಾಗೂ ಅತಿಥಿಗಳು ಸುಮಾರು 40 ನಿಮಿಷಗಳ ಕಾಲ ಯೋಗ ಮಾಡಿ ಗಮನ ಸೆಳೆದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ. ವಿ.ಹಲಸಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಆಯುಷ್ ಅಧಿಕಾರಿ, ಡಾ.ಪುಷ್ಪಾ, ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ, ಅಮೆರಿಕದ ಕಲ್ಪನಾ ಶ್ರೀಧರ್, ಎಸ್.ಟಿ.ಐ.ಐ.ಎಸ್.ನ ಪ್ರಾಂಶುಪಾಲೆ ಡಾ.ಮಧುಮತಿ, ನಿರ್ದೇಶಕ ಡಾ.ಎನ್.ನಾಗೇಶ್, ಚಂದ್ರವನ ಆಶ್ರಮದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಇತರರು ಇದ್ದರು.