

ಮುಂಡರಗಿ: ಭಾರತ ಮೂಲದ ಯೋಗ ಪದ್ಧತಿಗೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಅನಾದಿ ಕಾಲದಿಂದಲೂ ಯೋಗ ನಮ್ಮಲ್ಲಿ ಜಾರಿಯಲ್ಲಿದೆ. ಮಿತ ಆಹಾರ, ಯೋಗ ಪದ್ಧತಿ ರೂಢಿಸಿಕೊಂಡು ಆರೋಗ್ಯಯುತ ಬದುಕು ಕಂಡುಕೊಳ್ಳಬೇಕು ಎಂದು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ತಿಳಿಸಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಆಯುಷ್ ಇಲಾಖೆ, ಪತಂಜಲಿ ಯೋಗ ಸಮಿತಿ, ಮದರ್ ಥೆರೆಸಾ ಹಾಗೂ ಅನ್ಮೋಲ್ ಯೋಗ ಕೇಂದ್ರಗಳ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡರ ಮಾತನಾಡಿ, ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಸಾಧನೆ ಸುಲಭವಾಗುತ್ತದೆ. ಯೋಗದಿಂದ ಮನಸು ಹಾಗೂ ದೇಹ ನಿಯಂತ್ರಿಸಲು ಸಾಧ್ಯವಿದೆ ಎಂದರು.
ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಯೋಗಪಟು ಎಂ.ಬಿ. ಬಸಣ್ಣಶೆಟ್ಟಿ ಮಾತನಾಡಿದರು.
ಅನ್ಮೋಲ್ ಯೋಗ ತರಬೇತಿ ಕೇಂದ್ರದ ಡಾ. ಮಂಗಳಾ ಸಜ್ಜನರ ನೇತೃತ್ವದಲ್ಲಿ ಯೋಗಾಭ್ಯಾಸ ಮಾಡಿದರು. ಪತಂಜಲಿ ಯೋಗ ಸಮಿತಿಯ ಮಂಜುನಾಥ ಅಳವಂಡಿ, ಮದರ್ ಥೆರೆಸಾ ಯೋಗ ಕೇಂದ್ರದ ಮಂಜುಳಾ ಇಟಗಿ, ಡಾ.ಡಿ.ಸಿ. ಮಠದ, ಡಾ. ನಿಂಗು ಸೊಲಗಿ, ಮಂಜುನಾಥ ಇಟಗಿ, ಬಿ.ಆರ್. ಕುಲಕರ್ಣಿ, ಜ್ಯೋತಿ ಹಾನಗಲ್ಲ, ಶಂಕರ ಕುಕನೂರ, ಶ್ರೀನಿವಾಸ ಕಟ್ಟಿಮನಿ, ಮಂಜುನಾಥ ಮುಧೋಳ, ಡಾ. ಚಂದ್ರಕಾಂತ ಇಟಗಿ ಮತ್ತಿತರರು ಇದ್ದರು.