ಶಿರಸಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ: ವಿಜಯವಾಣಿ ಮಾಧ್ಯಮ ಸಹಯೋಗ

Sirsi-Yoga-Day1-
Published on

ಶಿರಸಿ:ಯೋಗ ಜೀವಾತ್ಮ ಮತ್ತು ಪರಮಾತ್ಮನನ್ನು ಒಂದಾಗಿಸುವ ಪ್ರಕ್ರಿಯೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನೇ ಬದಲಿಸುವ ಶಕ್ತಿ ಯೋಗಕ್ಕಿದೆ. ವ್ಯಕ್ಯಿತ್ವ ಬದಲಾವಣೆ ಮೂಲಕ ಸಮಾಜದ ಬದಲಾವಣೆಗೆ ಸಾಧ್ಯವಾಗುತ್ತದೆ ಎಂದು ಶಿರಳಗೆ ಚೈತನ್ಯ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.
ನಗರದ ನೆಮ್ಮದಿ ರಂಗಧಾಮದಲ್ಲಿ ಶುಕ್ರವಾರ ನಡೆದ 10ನೇ ಅಂತಾರಾಷ್ಟ್ರೀಯಯೋಗ ದಿನಾಚರಣೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ರಾಷ್ಟ್ರೋನ್ನತಿಗಾಗಿ ಯೋಗದ ಮೂಲಕ ವೈಯಕ್ತಿಕ ಕೊಡುಗೆ ವಿಷಯದ ಕುರಿತು ಅವರು ಆಶೀರ್ವಾದ ಪೂರ್ವಕ ವಿಶೇಷ ಸಂದೇಶ ನೀಡಿದರು. ಭಗವದ್ಗೀತೆಯಲ್ಲಿ ಅನೇಕ ಯೋಗಗಳನ್ನು ಶ್ರಿ ಕೃಷ್ಣ ಪರಮಾತ್ಮ ಹೇಳಿದ್ದಾನೆ. ಯೋಗದ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿ ಗ್ರಂಥದ ರೂಪದಲ್ಲಿ ನೀಡಿದವರು ಪತಂಜಲಿ ಮುನಿಗಳು. ಆಯುರ್ವೇದದ ಮೂಲಕ ಶರೀರ ಶಾಸ್ತ್ರವನ್ನೂ ತಿಳಿಸಿದ ಪತಂಜಲಿ ಮುನಿಜ ಶ್ರೇಷ್ಠರಾಗಿದ್ದಾರೆ. ಭಾರತ ದೇಶ ಜ್ಞಾನದ ಖನಿ. ಜ್ಞಾನದ ರಾಶಿಯ ಒಂದು ಶಾಖೆಯೇ ಯೋಗವಾಗಿದೆ.

ರಾಷ್ಟ್ರೋನ್ನತಿ ಕೇವಲ ಭೌತಿಕ ಬೆಳವಣಿಗೆಯಿಂದ ಮಾತ್ರ ಸಾಧ್ಯವಿಲ್ಲ. ಪ್ರತಿ ವ್ಯಕ್ತಿ ಆಂತರಿಕವಾಗಿ ಬೆಳವಣಿಗೆ ಆಬೇಕು. ಹೀಗಾಗಿ, ನಮ್ಮ ಋಷಿಮುನಿಗಳು ತಮ್ಮ ಒಳಗಡೆಯ ಸಂಗತಿಗಳನ್ನು, ಶಕ್ತಿಯನ್ನು ಅಧ್ಯಯನ ಮಾಡುತ್ತಿದ್ದರು. ಪ್ರಾಚೀನ ಗ್ರಂಥ, ಉಪನಿಷತ್ ಗಳಲ್ಲಿ ಯೋಗದ ಉಪದೇಶಗಳು ಕಾಣುತ್ತವೆ. ಯೋಗ ಭಾರತೀಯ ಸನಾತನ ಜೀವನ ಶೈಲಿಯ ಅವಿಭಾಜ್ಯ ಅಂಗ. ಯೋಗ ಜೀವನ ಪದ್ಧತಿಯೂ ಆಗಿದೆ. ಜೀವಾತ್ಮನನ್ನು ಪರಮಾತ್ಮನೊಂದಿಗೆ ಸಂಯೋಜಿಸುವುದನ್ನು ಯೋಗ ಎನ್ನುತ್ತಾರೆ. ಕುಣಿಯುವ ಮನಸ್ಸನ್ನು ಅಲೆ ರಹಿತವಾಗಿ ಮಾಡುವುದು ಯೋಗ. ಯೋಗದ ದಾರಿಯಲ್ಲಿ ಸಾಗಿದರೆ ನಮ್ಮ ದೇಶ ಹಿಂದಿನ ಭವ್ಯತೆಯನ್ನು ಮತ್ತೆ ಪಡೆಯಲು ಸಾಧ್ಯವಿದೆ. ನಡೆ ಮತ್ತು ನುಡಿಯಲ್ಲಿ ಸರಳತೆ ಇರಬೇಕು. ಮಕ್ಕಳಿಗೆ ಯಾವುದೇ ಶಿಕ್ಷಣ ನೀಡಿದರೂ ಸತ್ಯ ಮತ್ತು ಪ್ರಾಮಾಣಿಕತೆ ಕಲಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಭಾರತದ ಇತಿಹಾಸ ನಮಗೆ ಹೆಮ್ಮೆ ಮೂಡಿಸುತ್ತಿದೆ. ಸಹಸ್ರಾರು ವರ್ಷಗಳ ಹಿಂದೆ ಜಗತ್ತಿಗೇ ಭಾರತ ಗುರುವಾಗಿತ್ತು. ಅಂದು ಸೈನ್ಯ ಅಥವಾ ಸಂಪತ್ತಿನ ಕಾರಣ ಭಾರ ಜಗತ್ತಿನಲ್ಲಿ ಗುರುತಿಸಿಕೊಂಡಿರಲಿಲ್ಲ. ಜ್ಞಾನದ ಅಗಾಧ ಭಂಡಾರದ ಮೂಲಕ ಗುರುವಾಗಿತ್ತು. ನಮ್ಮ ಋಷಿ ಮುನಿಗಳು ಜ್ಞಾನದ ಒಂದೊಂದೇ ವಿಷಯದಲ್ಲಿ ಸಾಧನೆ ಮಾಡುವ ಮೂಲಕ ಪರಾಕಾಷ್ಟೆ ತಲುಪಿದ್ದರು. ಪರಕೀಯರ ದಾಳಿಯಿಂದ ನಾವು ನಿಜ ಮೌಲ್ಯ ಏನು ಎಂಬುದನ್ನು ಮರೆತಿದ್ದೇವೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಯೋಗ ವಿಸ್ತರಿಸಿದ್ದು, ಜಗತ್ತೇ ಒಪ್ಪಿಕೊಂಡಿದೆ. ಅಭಿವೃದ್ಧಿಯ ಜೊತೆ ಮೋದಿಜಿಯವರು ನಮ್ಮ ಜ್ಞಾನ ಸಂಪತ್ತನ್ನು ಎಲ್ಲೆಡೆ ವಿಸ್ತರಿಸಿದ್ದಾರೆ. ಯೋಗದ ಮೂಲಕ ಆರೋಗ್ಯದ ಸ್ವಸ್ಥತೆಗೆ ಕಾರಣರಾಗೋಣ. ಇಂದಿನ ಆಹಾರ ಪದ್ಧತಿ ಸಮಸ್ಯೆಗೆ ಯೋಗವೇ ಪರಿಹಾರವಾಗಿದೆ ಎಂದರು.
ಯೋಗ ದಿನಾಚರಣಾ ಸಮಿತಿ ಅಧ್ಯಕ್ಷ ಅನಿಲ ಕರಿ, ಸಂಚಾಲಕ ಶ್ರೀಕಾಂತ ಹೆಗಡೆ, ಡಾ. ಶಿವರಾಮ ಕೆ. ವಿ., ಜನಾರ್ಧನ ಆಚಾರ್ಯ ಇತರರಿದ್ದರು. ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಯೋಗ ದಿನಾಚರಣೆಯ ಮಾಧ್ಯಮ ಸಹಯೋಗ ವಹಿಸಿತ್ತು.

200ಕ್ಕೂ ಅಧಿಕ ಜನ ಭಾಗಿ
ವಿವಿಧ ಸಂಘಟನೆಗಳ ಆಶ್ರಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಯೋಗ ದಿನಾಚರಣೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಿಂದಲೂ ಆಗಮಿಸಿದ 200ಕ್ಕೂ ಅಧಿಕ ಜನ ಪಾಲ್ಗೊಂಡು ಯೋಗ ಮಾಡಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವತಃ ಯೋಗ ಮಾಡುವ ಮೂಲಕ ಇತರರನ್ನೂ ಪ್ರೇರೇಪಿಸಿದರು. ಆಯುರ್ವೇದ ವೈದ್ಯೆ ಡಾ. ಪೂರ್ಣಿಮಾ ಹೆಗಡೆ, ಡಾ. ದಿನೇಶ ಹೆಗಡೆ, ಭಾಗೀರಥಿ ಹೆಗಡೆ ಯೋಗ ಹೇಳಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net