

ಗುರುಪುರ: ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ತಾಲೂಕುಮಟ್ಟದ 11ನೇ ವಿಶ್ವ ಯೋಗ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಶಾಲೆಯ 100ಕ್ಕೂ ಅಧಿಕ ವಿಶೇಷ ಸಾಮರ್ಥ್ಯದ ಮಕ್ಕಳು, ಸಾಮಾನ್ಯ ಮಕ್ಕಳು ಹಾಗೂ ಶಿಕ್ಷಕರ ಜತೆಗೂಡಿ ಯೋಗಾಭ್ಯಾಸ ಮಾಡಿದ ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ) ಎಚ್.ಆರ್.ಈಶ್ವರ್ ಮಾತನಾಡಿ, ವಿಶೇಷ ಸಾಮರ್ಥ್ಯದ ಮಕ್ಕಳು ಸಾಮಾನ್ಯ ಮಕ್ಕಳಂತೆ ಯೋಗಾಭ್ಯಾಸದಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ. ನಿರಂತರ ಯೋಗಾಭ್ಯಾಸದಿಂದ ಬದುಕು ಸುಂದರವಾಗುವುದು. ಮನೆಯಲ್ಲಿ ಪಾಲಕರೂ ಯೋಗ ನಡೆಸುವಂತೆ ವಿದ್ಯಾರ್ಥಿಗಳು ಪ್ರೇರಣೆ ನೀಡಬೇಕು. ತನ್ಮೂಲಕಸ್ವಸ್ಥ ಸಮಾಜ ನಿರ್ಮಿಸಬೇಕು ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್ ಮಾತನಾಡಿ, ಯೋಗವು ನಮ್ಮ ದೈನಂದಿನ ಬದುಕಿನ ಚಟುಚಟಿಕೆಯಾಗಬೇಕು. ಕ್ರೀಡೆಗೆ ಬಹಳಷ್ಟು ಕೊಡುಗೆ ನೀಡುತ್ತಿರುವ ಮಂಗಳಜ್ಯೋತಿ ಶಾಲೆ ಈ ಪ್ರದೇಶದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ ಎಂದರು.
ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಮಾತನಾಡಿ, ಶಾಲೆಯಲ್ಲಿ ತಾಲೂಕುಮಟ್ಟದ ವಿಶ್ವ ಯೋಗ ದಿನಾಚರಣೆ ನಡೆಯುತ್ತಿರುವುದು ನಮ್ಮೆಲ್ಲರ ಸುಯೋಗ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಸ್ಫೂರ್ತಿ ನೀಡುವ ಕಾರ್ಯಕ್ರಮವಾಗಿದೆ ಎಂದರು.
ಪ್ರೌಢಶಾಲಾ ಮುಖ್ಯಶಿಕ್ಷಕ ರಮೇಶ್ ಆಚಾರ್ಯ ಪ್ರಸ್ತಾವಿಸಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ವಿಠಲ್ ವಾಗ್ಮೋರೆ ಇದ್ದರು. ಯೋಗ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ಯೋಗಾಭ್ಯಾಸ ನಡೆಸಿಕೊಟ್ಟರು. ಪ್ರಾಥಮಿಕ ಶಾಲಾ ಶಿಕ್ಷಕಿ ಹರಿಣಾಕ್ಷಿ ವಂದಿಸಿದರು.