ಪಂಚಭೂತಗಳಲ್ಲಿ ಯೋಧ ಸುರೇಶ ಲೀನ

14 AKR 01
Published on

ಅಕ್ಕಿಆಲೂರ: ಹೃದಯಾಘಾತದಿಂದ ನಿಧನರಾಗಿದ್ದ ಪಟ್ಟಣದ ಬಸವೇಶ್ವರ ನಗರದ ನಿವಾಸಿ, ನಿವೃತ್ತ ಯೋಧ ಸುರೇಶ ವೀರಭದ್ರಪ್ಪ ಬಡಿಗೇರ ಅವರ ಅಂತಿಮ ಸಂಸ್ಕಾರ ಪಟ್ಟಣದ ನರಸಿಂಗ್ ನಗರದ ರುದ್ರಭೂಮಿಯಲ್ಲಿ ಶನಿವಾರ ನಡೆಯಿತು.

ತಹಸೀಲ್ದಾರ್​ಪಿ. ಎಸ್. ಎರ್ರಿಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಅಗಲಿದ ವೀರ ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು. ಅಕ್ಕಿಆಲೂರಿನ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಮೃತ ಸುರೇಶ ಬಡಿಗೇರ ಅವರ ಅಂತಿಮ ದರ್ಶನ ಪಡೆದರು. ಸಾವಿರಾರು ಜನರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಸುರೇಶ ಬಡಿಗೇರ ಕರ್ತವ್ಯದಲ್ಲಿದ್ದಾಗ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೈನಿಕರ ವಿರುದ್ಧ ಹೋರಾಡಿದ್ದರು. ಅಲ್ಲದೆ, ಭಯೋತ್ಪಾದಕರನ್ನು ಶಸ್ತ್ರಗಳ ಸಹಿತ ಸೆರೆ ಹಿಡಿದಿದ್ದರು.

ತೀವ್ರ ಹೃದಯಾಘಾತದ ಹಿನ್ನೆಲೆಯಲ್ಲಿ ಸುರೇಶ ಅವರನ್ನು ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾಗಿದ್ದರು. ಅವರ ಇನ್ನಿಬ್ಬರು ಸಹೋದರರಾದ ಮೌನೇಶ ಮತ್ತು ವಿನಾಯಕ ಕೂಡ ಯೋಧರಾಗಿದ್ದು, ಮೌನೇಶ ನಿವೃತ್ತಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net