

ಬೆಂಗಳೂರು: ಮ್ಯಾಗಿ, ನೂಡಲ್ಸ್ ಅಂದ್ರೆ ಮಕ್ಕಳಿಗೆ ಮಾತ್ರವಲ್ಲ, ಬಹುತೇಕ ಎಲ್ಲ ವಯೋಮಾನದವರಿಗೂ ಇಷ್ಟ. ಎರಡೇ ನಿಮಿಷದಲ್ಲಿ ತಿಂದು ಮುಗಿಸುವ ತವಕ. ಅಷ್ಟೊಂದು ಇಷ್ಟಪಟ್ಟು ತಿನ್ನುವ ನೂಡಲ್ಸ್ನಲ್ಲಿ ಸಿಗಬಾರದ್ದು ಸಿಕ್ಕಿ ಬಿಟ್ಟರೆ?
ಅಷ್ಟಕ್ಕೂ ಈಗ ಏನು ಸಿಕ್ತು ಅಂತೀರಾ? ನೂಡಲ್ಸ್ ಮಸಾಲ ಪ್ಯಾಕೇಟ್ನಲ್ಲಿ ಬಳಸಿದ ಬ್ಯಾಂಡೇಜ್ ಪತ್ತೆಯಾಗಿದೆ! ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಮಾನಸ ಎಂಬುವವರು ಮನೆ ಸಮೀಪದ ಅಂಗಡಿಯೊಂದರಲ್ಲಿ ನೂಡಲ್ಸ್ ಪ್ಯಾಕೇಟ್ ಖರೀದಿಸಿದ್ದರು. ನೂಡಲ್ಸ್ ಬೇಯಿಸಲು ಮನೆಯಲ್ಲಿ ಪ್ಯಾಕೇಟ್ ಓಪನ್ ಮಾಡಿದ್ದಾರೆ. ಆಗ ಮಸಾಲ ಪ್ಯಾಕೇಟ್ನಲ್ಲಿ ಮಸಲಾ ಪುಡಿ ಜತೆಗೆ ಬಳಸಿದ ಬ್ಯಾಂಡೇಜ್ ಇರುವುದನ್ನ ನೋಡಿ ಶಾಕ್ ಆಗಿದ್ದಾರೆ. ಬ್ಯಾಂಡೇಜ್ ಇರುವ ಫೋಟೋವನ್ನು 'ವಿಜಯವಾಣಿ' ಪತ್ರಿಕೆಗೆ ಮಾನಸ ಅವರ ಸಹೋದರಿ ಮಂದಾರ ಕಳುಹಿಸಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರತಿ ನೂಡಲ್ಸ್ನ ಪ್ಯಾಕೆಟ್ ಒಳಗೆ ಮಸಲಾ ಪುಡಿಯ ಚಿಕ್ಕದೊಂದು ಪ್ಯಾಕೇಟ್ ಇರುತ್ತೆ. ಅದರಲ್ಲಿ ಬ್ಯಾಂಡೇಜ್ ಸಿಕ್ಕಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ. ನೂಡಲ್ಸ್ ತಯಾರಿಕಾ ಕಂಪನಿಯಲ್ಲೇ ದುರುದ್ದೇಶದಿಂದಲೇ ಯಾರಾದರೂ ಹಾಕಿರಬಹುದೇ? ಅಥವಾ ಸಿಬ್ಬಂದಿ ಬೇಜವಾಬ್ದಾರಿಯಿಂದ ಬಳಸಿದ್ದ ಬ್ಯಾಂಡೇಜ್ ಅನ್ನು ಮಸಾಲ ಪುಡಿ ತಯಾರಿಕಾ ಘಟಕದಲ್ಲಿ ಬೀಳಿಸಿದ್ದು, ಆಕಸ್ಮಿಕವಾಗಿ ಇದು ಪ್ಯಾಕಿಂಗ್ ಆಯಿತೇ? ಇದ್ಯಾವುದಕ್ಕೂ ಉತ್ತರ ಸಿಕ್ಕಿಲ್ಲ.