

ಬೆಂಗಳೂರು: ನಮ್ಮ ಮೆಟ್ರೋದ ಚಾಲಕರಹಿತ ಹಳದಿ ಮಾರ್ಗಕ್ಕೆ ಆಗಸ್ಟ್ನಲ್ಲಿ ಚಾಲನೆ ಸಿಗುವುದು ಬಹುತೇಕ ಖಚಿತಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸಿದೆ.
ಜು.22ಕ್ಕೆ ಸಿಎಂಎಸ್ಆರ್ ಆಯುಕ್ತರು ಅಂತಿಮ ಪರಿಶೀಲನೆ ನಡೆಸಲಿದ್ದು, ಈಗಾಗಲೆ ಇಂಡಿಪೆಂಡೆಂಟ್ ಸೇಫ್ಟಿ ಅಸೆಸ್ಸರ್ (ಐಎಸ್ಎ) ಎಲ್ಲ ದಾಖಲೆ, ಅಂಕಿ&ಅಂಶವನ್ನು ಪರಿಶೀಲಿಸಿದ ಬಳಿಕ ಪ್ರಮಾಣ ಪತ್ರವನ್ನು ರೈಲ್ವೆಯ ಮೆಟ್ರೋ ರೈಲು ಸುರಕ್ಷಣಾ ಆಯೋಗಕ್ಕೆ ನೀಡಲಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದರ್ಶಿಸಲು ಹಾಗೂ ದಾಖಲೀಕರಣಕ್ಕೋಸ್ಕರ ಸಾಕ್ಷ ಚಿತ್ರೀಕರಣಕ್ಕೆ ಬಿಎಂಆರ್ಸಿಎಲ್ ಮುಂದಾಗಿದ್ದು, ಆಗಸ್ಟ್ ಮೊದನೇ ಅಥವಾ ಎರಡನೇ ವಾರದಲ್ಲಿ ಚಿತ್ರೀಕರಣಗಳು ನಡೆಯಲಿದೆ.
ಬಸವನಗುಡಿಯ ರಾಷ್ಟ್ರೀಯ ವಿದ್ಯಾಲಯ ರಸ್ತೆ ನಿಲ್ದಾಣದಿಂದ ಪ್ರಾರಂಭವಾಗಿ ಸಿಲ್ಕ್ಬೋರ್ಡ್, ಜಯದೇವ ಆಸ್ಪತ್ರೆ ಪ್ರಮುಖ ಕೇಂದ್ರಗಳ ಮೂಲಕ ಬೊಮ್ಮಸಂದ್ರವರೆಗೆ ಸಂಪರ್ಕ ಬೆಳೆಯಲಿದೆ.
ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಕಾರ್ಯಾಚರಿಸಲಿದ್ದು, ಸುಮಾರು 19.15 ಕಿಮೀ ಉದ್ದವನ್ನು ಹೊಂದಿದೆ. ಬೊಮ್ಮಸಂದ್ರ, ಹೆಬ್ಬಗೋಡಿ, ಇನ್ಫೊಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ಸ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ. ರಸ್ತೆ ನಿಲ್ದಾಣವರೆಗೆ ಕಾರ್ಯಚರಿಸಲಿದೆ. ಜಯನಗರದ ಆರ್.ವಿ. ರೋಡ್ನಿಂದ, ಬೊಮ್ಮಸಂದ್ರದವರೆಗೆ 3 ಇಂಟರ್ ಚೇಂಜ್ (ಸಿಲ್ಕ್ಬೋರ್ಡ್, ಆರ್.ವಿ.ರೋಡ್, ಜಯದೇವ ಆಸ್ಪತ್ರೆ) ನಿಲ್ದಾಣಗಳೊಂದಿಗೆ, ಒಟ್ಟು 16 ನಿಲ್ದಾಣಗಳನ್ನು ಒಳಗೊಂಡಿದೆ. ವಾಣಿಜ್ಯ ಸಂಚಾರ ಆರಂಭವಾದ ಬಳಿಕ ಪ್ರತಿನಿತ್ಯ ಸುಮಾರು 2.6 ಲ ಪ್ರಯಾಣಿಕರು ಈ ಮಾರ್ಗವಾಗಿ ಸಂಚರಿಸುವ ಸಾಧ್ಯತೆಗಳಿವೆ.