

ತುಮಕೂರು: ಮತ್ತೆ ಮಳೆರಾಯನ ಆರ್ಭಟ ಮುಂದುವರೆದಿದೆ. ಶುಕ್ರವಾರ ಬಿಡುವು ಕೊಟ್ಟಿದ್ದ ವರುಣಾ ಶನಿವಾರ ಮಧ್ಯಾಹ್ನದಿಂದ ಮತ್ತೆ ಅಬ್ಬರಿಸಿದ್ದಾನೆ. ಭಾರತೀಯ ಹವಾಮಾನ ಇಲಾಖೆ ವರದಿಯನ್ವಯ ಗುಡುಗು-ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುಂದಿನ 3 ದಿನಗಳ ಕಾಲ ಜಿಲ್ಲೆಯಲ್ಲಿ ಯಲ್ಲೋ ಅರ್ಲಟ್ ಘೋಷಿಸಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶಿಸಿದ್ದಾರೆ.
ಮುಂಜಾಗ್ರತೆ ವಹಿಸಲು ಸೂಚನೆ :- ಭಾರಿ ಮಳೆಯಿಂದ ಉಂಟಾಗಬಹುದಾದ ಪ್ರವಾಹದಿಂದ ಯಾವುದೇ ಜನ-ಜಾನುವಾರುಗಳ ಜೀವಹಾನಿಯಾಗದಂತೆ ಜಿಲ್ಲಾ, ತಾಲೂಕು,ಗ್ರಾಮ ಮಟ್ಟದ ಅಧಿಕಾರಿ, ಸಿಬ್ಬಂದಿ ಕೇಂದ್ರಸ್ಥಾನದಲ್ಲಿದ್ದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತುರ್ತು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳ ಮಾಹಿತಿ ಹೊಂದಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಳೆ, ಪ್ರವಾಹದ ವೇಳೆ ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ಬಗ್ಗೆ ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರಬೇಕು ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸಬೇಕು. ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಸಂಭವವಿರುತ್ತದೆ. ಇದರಿಂದ ಸಾವು-ನೋವುಗಳು ಉಂಟಾಗಬಹುದಾದ್ದರಿಂದ ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಿಳಿಹೇಳಬೇಕು. ಗ್ರಾಪಂ ವಿಪತ್ತು ನಿರ್ವಹಣಾ ಸಮಿತಿಗಳು ಪ್ರತಿ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ಮನವಿ
ಮಳೆ ಸಂದರ್ಭದಲ್ಲಿ ಕೆರೆ, ಕಟ್ಟೆಗಳ ಬಳಿ ಬಟ್ಟೆ ಹೋಗೆಯಲು ತೆರಳಬಾರದು. ನೀರಿನ ಬಳಿ ಸೆಲ್ಫಿ ಸಾಹಸಗಳಿಂದ ದೂರವಿರಿ. ಮಕ್ಕಳು ಮತ್ತು ವಯೋವೃದ್ಧರನ್ನು ಮನೆಯಿಂದ ಹೊರಗಡೆ ಒಂಟಿಯಾಗಿ ತೆರಳದಂತೆ ಎಚ್ಚರಿಕೆ ವಹಿಸಬೇಕು. ಗುಡುಗು-ಮಿಂಚು, ಸಿಡಿಲು ಬಡಿಯುವ ಸಂದರ್ಭದಲ್ಲಿ ಮನೆಯ ಹೊರಗಡೆ ಇರುವವರು ತುರ್ತಾಗಿ ಸುರಕ್ಷಿತವಾದ ತಗ್ಗು ಪ್ರದೇಶಕ್ಕೆ ತೆರಳಿ ರಕ್ಷಣೆ ಪಡೆದುಕೊಳ್ಳಬೇಕು. ಮರ, ವಿದ್ಯುತ್ ಕಂಬ, ಜಲಾಶಯ ಇತರೆ ಪ್ರತ್ಯೇಕ ವಸ್ತುಗಳಿಂದ ದೂರವಿರಬೇಕು. ಮಿಂಚು ಒಬ್ಬರಿಂದ ಒಬ್ಬರಿಗೆ ಸಂಚರಿಸದಂತೆ ಜನ ಸಂದಣಿಯಾಗದಂತೆ ಅಂತರ ಕಾಪಾಡಿಕೊಳ್ಳಬೇಕು ಎಂದು ಶುಭಕಲ್ಯಾಣ್ ಮನವಿ ಮಾಡಿದ್ದಾರೆ.
ಸಹಾಯವಾಣಿ
ಮಳೆ ಅವಡ ಸಂಭವಿಸಿದ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಪರ್ಕಿಸಬೇಕು. ಕೆರೆ-ಕಟ್ಟೆಗಳ ಏರಿ,ಬಂಡ್, ಕೋಡಿಗಳಲ್ಲಿ ನೀರು ಸೋರಿಕೆ ಕಂಡು ಬಂದಲ್ಲಿ, ರಸ್ತೆಗಳ ಮೇಲೆ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದ್ದಲ್ಲಿ, ಮರ ಬಿದ್ದು ವಾಹನ ಸಂಚಾರ ಸ್ಥಗಿತವಾಗಿದ್ದಲ್ಲಿ, ವಿದ್ಯುತ್ ಕಂಬ, ಲೈನ್ ಬಿದ್ದಿದ್ದಲ್ಲಿ, ಮನೆಯೊಳಗಡೆ ನೀರು ನುಗ್ಗಿದಲ್ಲಿ, ಮನೆ ಗೋಡೆ, ಛಾವಣಿ ಕುಸಿದುಬಿದ್ದಿದ್ದ ಹಾಗೂ ಇತರೆ ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗಳಾದ 7304975519, 0816-&2213400, 155304ಕ್ಕೆ ಕರೆ ಮಾಡಿ ನೆರವು ಪಡೆಯಬಹುದು.