

ಬೆಂಗಳೂರು: ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ ಹಲವು ಜಿಲ್ಲೆಗಳಲ್ಲಿ ಬಿರುಸುಗೊಂಡಿದೆ. ಯಾದಗಿರಿ, ಶಿವಮೊಗ್ಗದ ಆಗುಂಬೆ, ಹಾವೇರಿ, ಹಲಬುರಗಿಯ ಅಳಂದ, ಬೆಂ.ಗ್ರಾಮಾಂತರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಶನಿವಾರ ವರ್ಷಧಾರೆಯಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಯಾದಗಿರಿ,ವಿಜಯಪುರ, ಕೊಪ್ಪಳ, ಕಲಬುರಗಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗಿನಲ್ಲಿ ಆ.18ರಿಂದ ಮುಂದಿನ ಎರಡು ದಿನ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಘೋಷಿಸಿದೆ. ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಉತ್ತರ ಕನ್ನಡದಲ್ಲಿ ಆ.20ರಂದು ಯೆಲ್ಲೋ ಅರ್ಲಟ್ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ವರ್ಷಧಾರೆಯಾಗಲಿದೆ.
ಉತ್ತರ ಕರ್ನಾಟಕದ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಆ.18ರಿಂದ ಆ.21ರವರೆಗೆ ಗುಡುಗು ಸಹಿತ ಭಾರಿ ಮಳೆ ಬೀಳುವ ಸಂಭವವಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ಮುಂದಿನ ಮೂರು ದಿನ ಒಳ್ಳೆಯ ಮಳೆ ಸುರಿಯಲಿದೆ. ಆ.22ರಿಂದ ರಾಜ್ಯದಲ್ಲಿ ಮಳೆ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ