

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡದ ಅಂಕೋಲಾ, ಬನವಾಸಿ, ಬಾಗಲಕೋಟೆ, ಬೀದರ್, ಗದಗದ ರೋಣ,ಕಲಬುರಗಿ, ಬೆಂ. ಗ್ರಾಮಾಂತರದ ಹೊಸಕೋಟೆ, ಚಿತ್ರದುರ್ಗದ ಹಿರಿಯೂರು, ತುಮಕೂರಿನ ಮಧುಗಿರಿ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಗುರುವಾರ ಭರ್ಜರಿ ವರ್ಷಧಾರೆಯಾಗಿದೆ.
ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಜೂ 7ರಿಂದ ಜೂ 9ರವರೆಗೆ, ರಾಮನಗರ, ಮೈಸೂರು, ಚಾಮರಾಜನಗರದಲ್ಲಿ ಮುಂದಿನ 24 ಗಂಟೆ ಭಾರಿ ಪ್ರಮಾಣದಲ್ಲಿ ವರ್ಷಧಾರೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಘೋಷಿಸಿದೆ.
ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನ ದುರ್ಬಲವಾಗಲಿರುವ ಮಾನ್ಸೂನ್, ಜೂ 9ರಿಂದ ಚುರುಕು ಪಡೆಯಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 9ರಿಂದ ಜೂ 11ರವರೆಗೆ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಹಿನ್ನೆಲೆಯಲ್ಲಿ ಯೆಲ್ಲೋ ಅರ್ಲಟ್ ನೀಡಲಾಗಿದೆ. ಗಂಟೆಗೆ 45 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ಕೆಲ ಜಿಲ್ಲೆಗಳಲ್ಲಿ ಬಿರು ಗಾಳಿ ಪ್ರಮಾಣವೂ ಜಾಸ್ತಿ ಇರಲಿದ್ದು, ಸಾಧಾರಣ ವರ್ಷಧಾರೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 4 ದಿನ ಮೋಡ ಕವಿದ ವಾತಾವರಣ ಜತೆಗೆ ಅಲ್ಲೆಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ವಾಡಿಕೆಗಿಂತ ಹೆಚ್ಚು ಮಳೆ: ಮಾನ್ಸೂನ್ ಪ್ರವೇಶಿಸಿದ ದಿನದಿಂದ ಈವರೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಜೂ 1ರಿಂದ ಜೂ 6ರವರೆಗೆ ರಾಜ್ಯದಲ್ಲಿ ವಾಡಿಕೆಯಂತೆ 29 ಮಿಮೀ ಮಳೆಯಾಗುವ ಬದಲು 39 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.33 ಹೆಚ್ಚುವರಿ ಸುರಿದಿದೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಬಿದ್ದರೆ, ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸುರಿದಿದೆ.