ಲಾಭ ತಗೊಂಡು ಮೋಸ ಮಾಡಿದವರಿಗೆ ಜನತೆ ಬುದ್ಧಿ ಕಲಿಸುತ್ತಾರೆ: ಬಸನ್​ಗೌಡ ಪಾಟೀಲ್​ ಯತ್ನಾಳ್​

Yatnal
Published on

ಜಮಖಂಡಿ: ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಈ ಮಧ್ಯ ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಇನ್ನು ಜಮಖಂಡಿ ಬಿಜೆಪಿ ಅಭ್ಯರ್ಥಿ ಜಗದೀಶ್ ಗುಡಗುಂಟಿ ಪರ ಬಿರುಸಿನ ಮತ ಬೇಟೆಯಲ್ಲಿ ತೊಡಗಿರುವ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

ಚಪ್ಪಲಿ ದೂಳಿಗೂ ಸಮನಲ್ಲ

ಇನ್ನು ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ್ ಕಾಂಗ್ರೆಸ್​ನವರು ಯಾರೂ ವೀರಸಾವರ್ಕರ ಚಪ್ಪಲಿ ದೂಳಿಗೂ ಸಮನಲ್ಲ. ಜಮಖಂಡಿ ನಗರದಲ್ಲಿ ವೀರಸಾವರ್ಕರ್ ಹೆಸರು ಇಡಲು ಇಲ್ಲಿನ ಶಾಸಕರು(ಆನಂದ್​ ಸಿದ್ದು ನ್ಯಾಮಗೌಡ) ವಿರೋಧಿಸುತ್ತಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ದೇಶದ್ರೋಹಿ ಸಂಘಟನೆಗಳಾ PFI ಹಾಗೂ SDPI ಮೇಲಿನ ಕೇಸುಗಳನ್ನು ಹಿಂಪಡೆದಿದ್ದರು ಎಂದು ಭಾಷಣ ಮಾಡುವ ವೇಳೆ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

ಬದಲಾವಣೆ ಬೇಕಾಗಿದೆ

ಕರ್ನಾಟಕದಲ್ಲಿ ಬೊಮ್ಮಾಯಿ ಸರ್ಕಾರದ ನೇತೃತ್ವದಲ್ಲಿ ಶಾಶ್ವತ ನೀರಾವರಿ ಯೋಜನೆ, ಗೋಹತ್ಯೆ ನಿಷೇಧ ಸೇರಿದಂತೆ ಅನೇಕ ಜನಪರ ಕಾರ್ಯ ಮಾಡಿದ್ದೇವೆ.

ಜಮಖಂಡಿ ಭಾಗದಲ್ಲಿ ಅಭಿವೃದ್ದಿಯ ವಿಚಾರವಾಗಿ ಸಾಕಷ್ಟು ಬೇಡಿಕೆಗಳಿವೆ ಒಂದು ಬದಲಾವಣೆ ಬೇಕಾಗಿದೆ ಎಂದು ಮಾತನಾಡುವ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಹೆಸರೇಳದೆ ವಾಗ್ದಾಳಿ

ಇನ್ನು ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ಶಾಸಕ ಬಸನ್​​ಗೌಡ ಪಾಟೀಲ್​ ಯತ್ನಾಳ್​ ಸ್ವಪಕ್ಷೀಯ ನಾಯಕರ ಹೆಸರೇಳದೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಧೋಳ,ತೇರದಾಳ ,ಬಾಗಲಕೋಟೆಯಲ್ಲಿ ಏನಾದರೂ ಕೆತ್ತೆಬಜೆ ಮಾಡಿದ್ರೆ ಸರಿ ಇರಲ್ಲ. ಅಣ್ಣ ಮುಧೋಳದಾಗ ಒಂತರ ನಾಟಕ ಮಾಡೋದು ಬಾಗಲಕೋಟೆಯಲ್ಲಿ ಒಂತರಾ ನಾಟಕ. ತೇರದಾಳದಲ್ಲಿ ಸಿದ್ದು ಸವದಿ ಸೋಲಿಸೋಕೆ ಪ್ರಯತ್ನ ನಡೆಯುತ್ತಿದೆ ಅಣ್ಣ ಒಂತರಾ ತಮ್ಮ ಒಂತರಾ ಮಾಡೋದು ನಡೆಯಲ್ಲ ಎಂದು ನಿರಾಣಿ ಸಹೋದರರ ಹೆಸರೇಳದೆ ವಾಗ್ದಾಳಿ ನಡೆಸಿದ್ದಾರೆ.

ಶೆಟ್ಟರ್, ಸವದಿ ವಿರುದ್ಧ ವಾಗ್ದಾಳಿ

ಇತ್ತೀಚಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್​ ಸಿಗದೇ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದ ಜಗದೀಶ್​ ಶೆಟ್ಟರ್​ ಹಾಗೂ ಲಕ್ಷ್ಮಣ್​ ಸವದಿ ವಿರುದ್ದವೂ ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ.

ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಹೋದರು ಇವರಿಗೆ ಪಕ್ಷ ಏನು ಕಡಿಮೆ ಮಾಡಿತ್ತು. ಶಾಸಕ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗಿತ್ತು.

ಇನ್ನೊಬ್ಬರು ಸೋತರೂ ಕೂಡ ಡಿಸಿಎಂ ಮಾಡಲಾಗಿತ್ತು ಎಲ್ಲ ಲಾಭ ತಗೊಂಡು ಇಂದು ಮೋಸ ಮಾಡಿದಾರಲ್ಲ ಇದಕ್ಕೆ ಜನ ಬುದ್ದಿ ಕಲಿಸೇ ಕಲಿಸುತ್ತಾರೆ. ಮುಧೋಳದಲ್ಲಿ ಕಾರಜೋಳ, ಬೀಳಗಿಯಲ್ಲಿ ‌ನಿರಾಣಿ ಎಲ್ಲರೂ ಗೆಲ್ಲಬೇಕು ಎಂದು ಆಶಿಸಿದ್ದಾರೆ.

Shettar savadi
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net