

ನವದೆಹಲಿ: ದೆಹಲಿ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಎಪಿಯ ಶೆಲ್ಲಿ ಓಬೆರಾಯ್ ಮತ್ತು ಆಲೆ ಮೊಹಮ್ಮದ್ ಇಕ್ಬಾಲ್ ಜಯಗಳಿಸಿದ್ದಾರೆ.
ಈ ಮೂಲಕ ಈ ಇಬ್ಬರು ನಾಯಕರು ಎರಡನೇ ಬಾರಿಗೆ ಮೇಯರ್-ಉಪಮೇಯರ್ ಆಗಿ ಮುಂದುವರೆದಿದ್ದಾರೆ.
ಇನ್ನು ಶೆಲ್ಲಿ ಓಬೆರಾಯ್ ಎದುರು ಮೇಯರ್ ಸ್ಥಾನಕ್ಕೆ ಬಿಜೆಪಿಯ ಶಿಖಾ ರೈ ನಾಮಪತ್ರ ಸಲ್ಲಿಸಿದ್ದರು. ಕಡೇ ಕ್ಷಣದಲ್ಲಿ ಶಿಖಾ ನಾಮಪತ್ರ ಹಿಂಪಡೆದ ಕಾರಣ ಮೇಯರ್ ಸ್ಥಾನಕ್ಕೆ ಶೆಲ್ಲಿ ಒಬೆರಾಯ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು ಮಾತನಾಡಿರುವ ಶಿಖಾ ರೈ ಸ್ಥಾಯಿ ಸಮಿತಿ ಸ್ಥಾನಗಳಿಗೆ ಚುನಾವಣೆ ನಡೆಯದ ಕಾರಣ ನಾನು ನನ್ನ ನಾಮಪತ್ರವನ್ನು ಹಿಂಪಡೆಯುತ್ತಿದ್ದೇನೆ ಎಂದು ತಿಳಿಸಿದ್ಧಾರೆ.
ಇನ್ನು ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸೋನಿ ಪಾಲ್ ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ ಎಎಪಿಯ ಆಲೆ ಮೊಹಮ್ಮದ್ ಇಕ್ಬಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.