ಮಹಿಳಾ ಸಬಲೀಕರಣಕ್ಕೆ ಜೀವನ ಮುಡುಪಿಟ್ಟ ಯಶೋದರಾ ದಾಸಪ್ಪ

IMG-20240528-WA0007
Published on

ಅರಸೀಕೆರೆ ಗ್ರಾಮಾಂತರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ತೋರಿದ ಹಾದಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡ ಧೀಮಂತ ಮಹಿಳೆ ಯಶೋದರಾ ದಾಸಪ್ಪ ಅವರ 119ನೇ ಜಯಂತ್ಯುತ್ಸವವನ್ನು ಕಸಬಾ ಹೋಬಳಿ ಗೀಜಿಹಳ್ಳಿ ಹೊರವಲಯದಲ್ಲಿರುವ ಕಸ್ತೂರ ಬಾ ಆಶ್ರಮದಲ್ಲಿ ಮಂಗಳವಾರ ಆಚರಿಸಲಾಯಿತು.


ಕಸ್ತೂರ ಬಾ ಆಶ್ರಮ ಹಾಗೂ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರೃ ಹೋರಾಟಗಾರ ಎಚ್.ಎಂ.ಶಿವಣ್ಣ ತಾಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಆರ್.ಅನಂತಕುಮಾರ್, ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜೆ ಲಿಂಗರಾಜು, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ದೈಹಿಕ ಶಿಕ್ಷಣ ಶಿಕ್ಷಕ ನಾಗೇಶ್ ಆಶ್ರಮದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಹಾಗೂ ಯಶೋದರಾ ದಾಸಪ್ಪ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿದರು.


ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಎಚ್.ಎಂ.ಶಿವಣ್ಣ ಮಾತನಾಡಿ, ಸ್ವಾತಂತ್ರೃ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಅವರೊಂದಿಗೆ ಮುಂಚೂಣಿಯಲ್ಲಿದ್ದ ಹಾಗೂ ಸ್ವಾತಂತ್ರ್ಯದ ಬಳಿಕ ಮಹಿಳೆಯರ ಸಬಲೀಕರಣಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟ ಯಶೋದರ ದಾಸಪ್ಪ ಅವರು ನಾಡು ಕಂಡ ದಿಟ್ಟ ಮಹಿಳೆ. ಮಧ್ಯಪಾನ ನಿಷೇಧಕ್ಕೆ ಒತ್ತಾಯಿಸಿ ಮಂತ್ರಿ ಪದವಿಗೆ ರಾಜೀನಾಮೆ ನೀಡುವ ಮೂಲಕ ಗಾಂಧಿವಾದದ ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರಿಂದ ಕರ್ನಾಟಕದ ಕಸ್ತೂರ ಬಾ ಎಂದು ಜನಪ್ರಿಯರಾದರು. ಇವರು ಆದರ್ಶ ಮಹಿಳೆಯರಿಗೆ ದಾರಿದೀಪ ಎಂದರು.


ತಾಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಆರ್.ಅನಂತ್‌ಕುಮಾರ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಲಕ್ಷಾಂತರ ಸ್ವಾತಂತ್ರ್ಯ ಸೇನಾನಿಗಳು ಹೋರಾಟ ನಡೆಸಿದ್ದರು. ಅದರಲ್ಲಿ ಕೆಲವರು ದೇಶ ಸ್ವಾತಂತ್ರ್ಯ ಕಂಡ ಬಳಿಕವೂ ದೇಶ ಕಟ್ಟುವ ಮಹಾ ಕಾರ್ಯದಲ್ಲಿ ತೊಡಗಿದರು. ಅದರಲ್ಲಿ ಯಶೋದರಾ ದಾಸಪ್ಪ ಮಹಿಳೆಯರ ಸಬಲೀಕರಣಕ್ಕೆಂದು ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಮಹಿಳಾ ಸಬಲೀಕರಣವಾಗದ ಹೊರತು ಸದೃಢ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂಬ ಆಚಲ ನಿಲುವು ಹೊಂದಿದ್ದ ಅವರು, ಆ ನಿಟ್ಟಿನಲ್ಲಿ ನಡೆಸಿದ ಹೋರಾಟ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.


ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅನಂತ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ಹಾಗೂ ಯಶೋದರ ದಾಸಪ್ಪ ಅವರ ಕುರಿತು ಪರಿಚಯ ಮಾಡಿಕೊಡಲಾಯಿತು. ಆದಿಚುಂಚನಗಿರಿ ಶಾಲಾ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net