ಯಲ್ಲಾಪುರ ಕೊಲೆ ಪ್ರಕರಣ- ಎರಡನೇ ಆರೋಪಿ ಅನಿಕೇತ ಮಿರಾಶಿ ಬಂಧನ

ylp-aniket-mirashi
Published on

ಯಲ್ಲಾಪುರ: ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ನಡೆದ ಸಿದ್ದಿ ಯುವಕನ ಕೊಲೆ ಪ್ರಕರಣದ ಎರಡನೇ ಆರೋಪಿ ಅನಿಕೇತ ವಿಜಯ ಮಿರಾಶಿ ಬುಧವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸಾಕಷ್ಟು ಪ್ರತಿಭಟನೆ ಬಳಿಕ ಅಂತೂ ಅನಿಕೇತ ಮಿರಾಶಿ ಬಂಧನವಾಗಿದ್ದು, ಸಿದ್ದಿ ಸಮುದಾಯ ಪ್ರತಿಭಟನೆಯನ್ನು ಕೈಬಿಟ್ಟಿದೆ.

    ಜಾತ್ರೆಗೆ ಬಂದ ಹಳಿಯಾಳದ ಸಿದ್ದಿ ಯುವಕ ಪ್ರಜ್ವಲ್ ಕಕ್ಕೇರಿಕರ್ ಕೊಲೆ ಪ್ರಕರಣದ ಎರಡನೇ ಆರೋಪಿ

 ಕಳೆದ ನಾಲ್ಕು ದಿನಗಳ ಹಿಂದೆ ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಗೆ ಬರುವಾಗ ಬೈಕ್‌ ಓವರ್ ಟೇಕ್ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದಿ ಯುವಕ ಹಾಗೂ ಇನ್ನೊಂದು ಗುಂಪಿನ ನಡುವೆ ಜಗಳ ನಡೆದಿತ್ತು. ಯುವಕರ ಗುಂಪೊಂದು ಹಳಿಯಾಳ ತಾಲೂಕಿನ ಸಾಂಬ್ರಾಣಿಯ ಪ್ರಜ್ವಲ ಕಕ್ಕೇರಿಕರ್‌ (24) ಎಂಬ ಸಿದ್ದಿ ಯುವಕನ ಹಲ್ಲೆ ನಡೆಸಿ ಕೊಲೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಎರಡನೇ ಆರೋಪಿ ಸಾಕಷ್ಟು ಪ್ರಭಾವಿಯಾಗಿದ್ದು, ಆತನನ್ನು ಬಂಧಿಸುವಂತೆ ಒತ್ತಾಯಿಸಿತ್ತು.

ಕೊಲೆಯಾದ ಯುವಕನ ಶವ ಪಡೆಯದೇ ಹಳಿಯಾಳ ಸಿದ್ದಿ ಸಮುದಾಯದವರು ಯಲ್ಲಾಪುರ ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ಕೈಗೊಂಡಿದ್ದರು. ಅಧಿಕಾರಿಗಳ ಮನವೊಲಿಕೆ, ಆರೋಪಿಯ ಬಂಧನದ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆದು, ಶವ ಪಡೆಯಲು ಮುಂದಾಗಿದ್ದರು. ಕೊಟ್ಟ ಭರವಸೆಯಂತೆ ಅಧಿಕಾರಿಗಳು ಎರಡನೇ ಆರೋಪಿ ಅನಿಕೇತ ಮಿರಾಶಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅನಿಕೇತನ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಕೆಲವೆಡೆಗಳಲ್ಲಿಯೂ ಆರೋಪಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದರು. ಅದರಲ್ಲಿ ಪಿಎಸ್ಐ ಸಿದ್ದಪ್ಪ ಗುಡಿ ನೇತೃತ್ವದ ತಂಡ ಕಲಘಟಗಿಯ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿ, ಕರೆತಂದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಡಿವೈಎಸ್ ಪಿ ಎಂ.ಎಸ್.ಪಾಟೀಲ 'ವಿಜಯವಾಣಿ' ಗೆ ತಿಳಿಸಿದ್ದಾರೆ. 

ಪ್ರತಿಭಟನೆ ರದ್ದು

ಆರೋಪಿ ಬಂಧನಕ್ಕೆ ಆಗ್ರಹಿಸಿ ಬುಧವಾರವೂ ಪ್ರತಿಭಟನೆ ಮುಂದುವರಿಸುವುದಾಗಿ ಸಿದ್ದಿ ಸಮುದಾಯದವರು ತಿಳಿಸಿದ್ದರು. ಆದರೆ, ಆರೋಪಿಯ ಬಂಧನದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು. ಸಂಜೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸಿದ ಸಿದ್ದಿ ಸಮುದಾಯದವರು ಮುಂದಿನ ನಡೆ ಬಗೆಗೆ ಚರ್ಚಿಸಿದ್ದಾರೆ. ಎರಡನೇ ಆರೋಪಿ ಬಂಧನ ನಮ್ಮ‌ ಪ್ರಮುಖ ಆಗ್ರಹವಾಗಿತ್ತು. ಈಗ ಅದು ಈಡೇರಿದೆ. ಆರೋಪಿಗಳಿಗೆಲ್ಲರಿಗೂ ಶಿಕ್ಷೆಯಾಗಬೇಕು. ಮೃತ ಯುವಕನ ಸದ್ಯ ತನಿಖೆ ನಡೆಯುವವರೆಗೂ ಕಾದು ನೋಡೋಣ. ತನಿಖೆ ಹಾದಿ ತಪ್ಪುವ ಲಕ್ಷಣ ಗೋಚರಿಸಿದಲ್ಲಿ ಮತ್ತೆ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿದ್ದಿ ಸಮುದಾಯದ ಮುಖಂಡ ಬೆನಿತ್ ಸಿದ್ದಿ ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net