More

  ಅನಾರೋಗ್ಯ ಕಾರಣದಿಂದ ಮತದಾನ ಮಾಡಿಲ್ಲ

  ಯಲ್ಲಾಪುರ: ಅನಾರೋಗ್ಯದ ಕಾರಣದಿಂದಾಗಿ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಟನೆ ನೀಡಿದ್ದಾರೆ.

  ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನದಲ್ಲಿ ಭಾಗವಹಿಸದೇ ಇರುವುದಕ್ಕೆ ಅನೇಕ ಊಹಾಪೋಹಗಳು ಹರಿದಾಡುತ್ತಿದ್ದು, ಅವೆಲ್ಲ ಸತ್ಯಕ್ಕೆ ದೂರವಾದದ್ದು. ನನ್ನ ಆರೋಗ್ಯ ಸರಿ ಇರಲಿಲ್ಲ. ಬೆಂಗಳೂರಿನಲ್ಲೇ ಇದ್ದ ನಾನು, ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದೆ. ವೈದ್ಯರ ಸಲಹೆಯ ಮೇರೆ ಸಂಜೆಯವರೆಗೂ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ಸಂಜೆ ನಂತರ ಚೇತರಿಸಿಕೊಂಡು ಕ್ಷೇತ್ರಕ್ಕೆ ಮರಳಿದ್ದೇನೆ. ಅಲ್ಲದೇ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ ಕುರಿತು ಅಸಮಾಧಾನ ಇರುವ ಕಾರಣಕ್ಕಾಗಿ ಮತ ಹಾಕಿಲ್ಲ. ನನ್ನ ಒಂದು ಮತದಿಂದ ಮೈತ್ರಿ ಅಭ್ಯರ್ಥಿ ಗೆಲುವು ಸಾಧ್ಯವಿಲ್ಲವಾಗಿತ್ತು ಎಂದು ವಿವರಿಸಿದರು.

  ವಿಪ್ ಉಲ್ಲಂಘನೆ ಬಗೆಗೆ ಪ್ರತಿಕ್ರಿಯಿಸಿದ ಅವರು, ಕಾನೂನಾತ್ಮಕ ಕ್ರಮ ಎದುರಿಸಲು ಸಿದ್ಧ. ಡಿಕೆಶಿ ನನ್ನ ಆಪ್ತ ಸ್ನೇಹಿತರು. ನಾನು ರಾತ್ರೋರಾತ್ರಿ ಅವರನ್ನು ಭೇಟಿಯಾದ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಈ ಹಿಂದೆ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಅವರನ್ನು ಭೇಟಿಯಾಗಿದ್ದೆ. ಕ್ಷೇತ್ರಕ್ಕೆ ವಿಶೇಷ ಅನುದಾನವನ್ನೂ ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ. ಈ ವಿಚಾರಕ್ಕೆ ಪಕ್ಷಾಂತರದ ಲೇಪ ಹಚ್ಚುವುದು ಸರಿಯಲ್ಲ ಎಂದರು.
  ಹುಣಶೆಟ್ಟಿಕೊಪ್ಪದಲ್ಲಿ ಸಿದ್ದಿ ಯುವಕನ ಕೊಲೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಹೆಬ್ಬಾರ, ಘಟನೆ ಯಾರಿಗೂ ಶೋಭೆ ತರುವುದಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಆರೋಪಿಗಳ ರಕ್ಷಣೆ ಮಾಡಬೇಕಾದ ಅಗತ್ಯವಿಲ್ಲ. ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದರು.

  ಬಿಜೆಪಿ ವಿರುದ್ಧ ಅಸಮಾಧಾನ: ಕಾಂಗ್ರೆಸ್ ಸೇರ್ಪಡೆ ಕುರಿತು ಯಾವುದೇ ಸ್ಪಷ್ಟ ಉತ್ತರ ನೀಡದ ಅವರು, ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ನೇಮಕ, ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಥಳೀಯ ಮುಖಂಡರು ನನ್ನ್ನ ವಿರುದ್ಧ ಮಾಡಿದ ಕೆಲಸದ ಬಗ್ಗೆ ಪಕ್ಷಕ್ಕೆ ದೂರು ನೀಡಿದ್ದೆ. ಆಗ ಕೆಲವರನ್ನು ಅಮಾನತು ಮಾಡಲಾಯಿತು. ನಂತರ ಮತ್ತೆ ಅದನ್ನು ಹಿಂಪಡೆಯಲಾಯಿತು. ಅಮಾನತು ಮಾಡಿದ್ದೇಕೆ, ಅದನ್ನು ಹಿಂಪಡೆದದ್ದೇಕೆ? ಎಂದು ಪ್ರಶ್ನಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts