ರಸ್ತೆ ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಿ

ROAD
ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಯಲಬುರ್ಗಾ ತಾಲೂಕಿನ ಸಂಕನೂರು-ಹಾಲಕೇರಿ ರಸ್ತೆ ಕೆಸರು ಗದ್ದೆಯಾಗಿರುವುದು.
Published on

ಯಲಬುರ್ಗಾ: ತಾಲೂಕಿನ ಗಡಿ ಗ್ರಾಮ ಸಂಕನೂರಿನ ಗ್ರಾಮಸ್ಥರು ಹೊಲದ ರಸ್ತೆ ನಿರ್ಮಿಸುವಂತೆ ಸೋಮವಾರ ಒತ್ತಾಯಿಸಿದ್ದಾರೆ.

ಸಂಕನೂರು-ಹಾಲಕೇರಿ ಸಂಪರ್ಕ ರಸ್ತೆಯನ್ನು ಸಾರ್ವಜನಿಕರು ಮಾತ್ರವಲ್ಲದೇ ರೈತರು ಉಪಯೋಗಿಸುತ್ತಿದ್ದಾರೆ. ನರೇಗಾದ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ದುರಸ್ತಿಗೊಳಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ. ಈ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಅನುದಾನ ಕೊರತೆ ನೆಪ ಹೇಳಿ ರಸ್ತೆ ದುರಸ್ತಿ ಮಾಡಲು ಮುಂದಾಗುತ್ತಿಲ್ಲ. ಪ್ರತಿ ಬಾರಿ ಮಳೆ ಬಂದಾಗ ಜಮೀನಿಗಳಿಗೆ ತೆರಳಿ ಕೃಷಿ ಚಟುವಟಿಕೆ ಕೈಗೊಳ್ಳಲು ತೊಂದರೆಯಾಗುತ್ತಿದೆ. ರಸ್ತೆಯ ಎರಡೂ ಬದಿ ಮುಳ್ಳು ಕಂಟೆಗಳು ಬೆಳೆದಿವೆ. ಇದರಿಂದ ಜಾನುವಾರು ಮತ್ತು ರೈತರಿಗೆ ಸಮಸ್ಯೆಯಾಗಿದೆ.

ಕೂಡಲೇ ರಸ್ತೆ ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಗ್ರಾಮಸ್ಥರಾದ ಮಹಾಂತೇಶ ಪಾಟೀಲ್, ಶರಣಪ್ಪ ಸಂದಿಮನಿ, ಬಸವರಾಜ ದ್ಯಾಂಪೂರ, ಮಹ್ಮದ್‌ಸಾಬ್ ಬೆಳ್ಳಟ್ಟಿ, ಮೌಲಾಸಾಬ್ ಮ್ಯಾಗೇರಿ ಗ್ರಾಮಾಡಳಿತವನ್ನು ಒತ್ತಾಯಿಸಿದ್ದಾರೆ.

ಸಂಕನೂರಿಂದ ಹಾಲಕೇರಿ ಸಂಪರ್ಕಿಸುವ ರಸ್ತೆಯ ಎರಡೂ ಬದಿ ರೈತರ ಅನುಕೂಲಕ್ಕಾಗಿ ಮುಳ್ಳು ಕಂಟೆ ತೆರವುಗೊಳಿಸಿ ಅನುಕೂಲ ಕಲ್ಪಿಸಲಾಗಿದೆ. ಸದ್ಯಕ್ಕೆ ಮಳೆಯಿಂದಾಗಿ ರಸ್ತೆ ಹದಗೆಟ್ಟಿದೆ. ಗರಸು ಹೇರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಅದಕ್ಕೆ ಹೆಚ್ಚಿನ ಅನುದಾನ ಅವಶ್ಯಕತೆ ಇದ್ದು, ವಿಪತ್ತು ನಿರ್ವಹಣಾ ಪರಿಹಾರದಲ್ಲಿ ರಸ್ತೆ ದುರಸ್ತಿಗೊಳಿಸಲು ತಾಲೂಕಾಡಳಿತಕ್ಕೆ ಪತ್ರ ಬರೆಯಲಾಗಿದೆ.ಎಫ್.ಡಿ. ಕಟ್ಟಿಮನಿಗ್ರಾಪಂ ಪಿಡಿಒ, ಯಲಬುರ್ಗಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net