ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ. ಎ. ಹೆಗಡೆ ದಂಟ್ಕಲ್ ವಿಧಿವಶ

M A Hegde
Published on

ಕಾರವಾರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ದಂಟ್ಕಲ್(73) ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾದರು.

ಎಂ.ಎ.ಹೆಗಡೆ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಶನಿವಾರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ಅವರು ಕೊನೆಯುಸಿರೆಳೆದಿದ್ದಾರೆ ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಸಿದ್ದಾಪುರ ಎಂಜಿಸಿ ಕಾಲೇಜ್ ನಲ್ಲಿ ಸಂಸ್ಕೃತ ಉಪನ್ಯಾಸಕರಾಗಿದ್ದ ಅವರು ಕೆರೆಮನೆ ಮೇಳದಲ್ಲಿ ಅತಿಥಿ ಕಲಾವಿದರಾಗಿ ಪಾತ್ರ ಮಾಡುತ್ತಿದ್ದರು‌.

ತಾಳಮದ್ದಲೆ‌ ಅರ್ಥಧಾರಿಯಾಗಿದ್ದ ಅವರು ಅರ್ಥಗಾರಿಕೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ನಿವೃತ್ತಿಯ ನಂತರ ಯಕ್ಷಗಾನ ಪ್ರಸಂಗ ರಚನೆ, ಅರ್ಥಧಾರಿಕೆಯಲ್ಲಿ ಸಂಪೂರ್ಣ ತೊಡಗಿಕೊಂಡಿದ್ದರು. ಎರಡು ಅವಧಿಗೆ ನಿರಂತರವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದರು.

ಯಕ್ಷಗಾನಗಳ ಸಿಡಿ ತಯಾರಿಕೆ, ಪುಸ್ತಕಗಳ ಪ್ರಕಟಣೆ ಕಾರ್ಯವನ್ನು ಅಕಾಡೆಮಿಯಿಂದ ಮಾಡಿಸಿದ್ದರು. ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ವರ್ಚುವಲ್ ವೇದಿಕೆಯಲ್ಲಿ "ಮಾತಿನ ಮಂಟಪ" ಎಂಬ ಕಾರ್ಯಕ್ರಮ ಆಯೋಜಿಸಿ 70 ಕ್ಕೂ ಹೆಚ್ಚು ಕಲಾವಿದರನ್ನು ಸಂದರ್ಶಿಸಿದ್ದರು.

ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಮತ್ತು ಪಿಸಿ ಜಾಬಿನ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಸಂಸ್ಕೃತದಲ್ಲಿಯೂ ಅಪಾರ ಪಾಂಡಿತ್ಯ ಹೊಂದಿದ್ದ ಅವರು ಆನಂತರ ಸಂಸ್ಕೃತ ಉಪನ್ಯಾಸಕರಾಗಿಯೂ ಸಹ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಬಗ್ಗೆ ವಿಶೇಷ ಒಲವು ಹೊಂದಿದ್ದರು.

ಸ್ವತಃ ಪಾತ್ರಧಾರಿಯೂ ಆಗಿದ್ದ ಹೆಗಡೆಯವರು 15ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಸೀತಾ ವಿಯೋಗ, ತ್ರಿಶಂಕು ಚರಿತೆ, ರಾಜಾ ಕಂದಾಮ ಮುಂತಾದವು ಅವರ ಜನಪ್ರಿಯ ಪ್ರಸಂಗಗಳು. ಅಲಂಕಾರ ತತ್ವ, ಭಾರತೀಯ ತತ್ವಶಾಸ್ತ್ರ ಪರಿಚಯ, ಬ್ರಹ್ಮಸೂತ್ರ ಚತು; ಸೂತ್ರಿ, ಮತ್ತು ಸಿದ್ಧಾಂತ ಬಿಂದು ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ. ಅತ್ಯಂತ ಪ್ರಖರ ಚಿಂತನೆಯ ವಿದ್ವಾಂಸರಾಗಿದ್ದ ಎಂ ಎ ಹೆಗಡೆ ತಮ್ಮ ಚಿಂತನೆಯನ್ನು ನಿಷ್ಠುರವಾಗಿ ಪ್ರತಿಪಾದಿಸುತ್ತಿದ್ದರು. ಸರಳ ಹಾಗೂ ನೇರ ನಡವಳಿಕೆಗೆ ಹೆಸರಾಗಿದ್ದರು. ಅವರು ರೂಪಿಸಿದ್ದ ಮಾತಿನ ಮಂಟಪ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು.

ಸಚಿವರ ಸಂತಾಪ: ಹೆಗಡೆ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅವರ ನಿಧನ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. ಈ ನಾಡು ಕಂಡ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಎಂ ಎ ಹೆಗಡೆ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದು ದುರದೃಷ್ಟಕರ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದರು. ಅವರ ಅಕಾಲಿಕ ನಿಧನದಿಂದ ನಿಜಕ್ಕೂ ಸಾಂಸ್ಕೃತಿಕ ಲೋಕ ಒಂದು ದಿಗ್ಗಜ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net