ಮಕ್ಕಳಿಂದ ಯಕ್ಷಗಾನ ಕಲೆ ಉಳಿವು: ಎಂ.ಶಾಂತರಾಮ ಕುಡ್ವ ಅನಿಸಿಕೆ

07
Published on

ಮೂಡುಬಿದಿರೆ: ಇಲ್ಲಿನ ಕಡಲಕೆರೆಯಲ್ಲಿರುವ ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ಪ್ರವರ್ತಿತ ಪ್ರೇರಣಾ ಶಾಲೆಯಲ್ಲಿ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷಧ್ರುವ-ಯಕ್ಷ ಶಿಕ್ಷಣ ಯೋಜನೆ ಉದ್ಘಾಟಿಸಲಾಯಿತು.

ಪಟ್ಲ ಫೌಂಡೇಶನ್ ಟ್ರಸ್ಟಿ ಪ್ರೇಮಾನಾಥ ಮಾರ್ಲ ಯೋಜನೆ ಉದ್ಘಾಟಿಸಿದರು. ಶಾಲೆಯ ಸಂಚಾಲಕ ಎಂ.ಶಾಂತರಾಮ ಕುಡ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಕಲೆ, ಸಂಸ್ಕೃತಿ, ಕ್ರೀಡೆ ಅಳಿಯದೆ ಉಳಿಯಬೇಕಾದರೆ ಯುವಜನರು, ವಿದ್ಯಾರ್ಥಿಗಳ ತೊಡಗಿಸುವಿಕೆ ಮುಖ್ಯ. ಈ ನಿಟ್ಟಿನಲ್ಲಿ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕೊಂಡುಹೋಗಲು, ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಉಚಿತ ಯಕ್ಷ ಶಿಕ್ಷಣದ ವ್ಯವಸ್ಥೆ ಮಾಡುವ ಮೂಲಕ ಪಟ್ಲ ಫೌಂಡೇಶನ್ ಮುಂಚೂಣಿಯಲ್ಲಿದ್ದು ಮಾದರಿಯಾಗಿ ನಿಲ್ಲುತ್ತದೆ. ಪಟ್ಲ ಫೌಂಡೇಶನ್ ಕಲಾವಿದರ ಬಗ್ಗೆ ಮಾತ್ರವಲ್ಲದೆ ಯಕ್ಷಗಾನದ ಭವಿಷ್ಯದ ಬಗ್ಗೆಯೂ ಗಮನ ಹರಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ, ಸಂಚಾಲಕರಾದ ಮನೋಜ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ಬಂಗೇರ, ಯಕ್ಷಗುರು ಅಕ್ಷಯ ಭಟ್, ಸೇವಾಂಜಲಿ ಟ್ರಸ್ಟ್ ಕೋಶಾಧಿಕಾರಿ ಎಸ್.ಎನ್.ಬೋರ್ಕರ್, ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್, ಸದಸ್ಯರಾದ ಮಂಜುನಾಥ ಶೆಟ್ಟಿ, ಆನಂದ ಕಾರ್ಲ, ಯಕ್ಷಧ್ರುವ ಫೌಂಡೇಶನ್ ಸದಸ್ಯ ಸಚಿನ್, ಧನಂಜಯ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ವತ್ಸಲಾ ರಾಜೇಶ್ ಸ್ವಾಗತಿಸಿದರು. ಶಶಿಕಲಾ ನಿರೂಪಿಸಿದರು. ಸುರೇಂದ್ರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net