ಯಶೋವರ್ಮ ಅಪೂರ್ವ ಯಕ್ಷಪ್ರೇಮಿ : ಬಿ.ಕೆ.ಧನಂಜಯ ರಾವ್ ಬಣ್ಣನೆ

sanmana
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಡಾ.ಯಶೋವರ್ಮ ಶಿಸ್ತು, ದಕ್ಷತೆಯಿಂದ ಯಕ್ಷರಂಗಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ ಅಪೂರ್ವ ಯಕ್ಷಪ್ರೇಮಿ. ಸಸ್ಯ ಶಾಸ್ತ್ರ ಉಪನ್ಯಾಸಕರಾಗಿ, ಮಾಂತ್ರಿಕ ಸ್ಪರ್ಶದಿಂದ ಸಂಶೋಧನೆಗೆ ಸೃಷ್ಟಿಸಿದ ಆರ್ಬೊರೇಟಮ್ ಯಶೋವನವಾಗಿ ತೆರೆದುಕೊಂಡಿದೆ. ತಾಂತ್ರಿಕತೆ ಶೈಕ್ಷಣಿಕ ಕ್ರಾಂತಿಯಿಂದ ಎಸ್‌ಡಿಎಂ ಶಿಕ್ಷಣ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು. ರೋಟರಿ ಸಂಸ್ಥೆಗೆ ಹೊಸ ಚೈತನ್ಯ ನೀಡಿ ಬೆಳೆಸಿದವರು ಎಂದು ಬೆಳ್ತಂಗಡಿಯ ಹಿರಿಯ ವಕೀಲ ಬಿ.ಕೆ.ಧನಂಜಯ ರಾವ್ ಹೇಳಿದರು.

ಬೆಳ್ತಂಗಡಿ ಲಾಯಿಲ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠ್ಠಾನ ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ, ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ಯಕ್ಷಗಾನ ಮಹೋಪಾಧ್ಯಾಯ ನೆಡ್ಲೆ ನರಸಿಂಹ ಭಟ್ ಸಂಸ್ಮರಣೆ, ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ, ಯಕ್ಷಾವತರಣ-5, ಯಶೋ-ಯಕ್ಷನಮನ, ಗಾನ, ನೃತ್ಯ, ಚಿತ್ರ ಕಾರ್ಯಕ್ರಮದಲ್ಲಿ ಅಗಲಿದ ಶಿಕ್ಷಣ ತಜ್ಞ ಡಾ.ಬಿ.ಯಶೋವರ್ಮ ಅವರಿಗೆ ನುಡಿನಮನ ಸಲ್ಲಿಸಿದರು.

ಉಜಿರೆ ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಕಸಾಪ ಜಿಲ್ಲಾಧ್ಯಕ್ಷ ಡಾ.ಶ್ರೀನಾಥ್ ಎಂ.ಪಿ. ಮಾತನಾಡಿದರು.ಪೂರನ್‌ವರ್ಮ ಕಾರ್ಯಕ್ರಮ ಉದ್ಘಾಟಿಸಿದರು. ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ ಸರಣಿ 5ರ ಸಾಂಸ್ಕೃತಿಕ ಸಾಧಕಿ ರಿಷಿಕಾ ಕುಂದೇಶ್ವರ್ ಅವರಿಗೆ ಕುರಿಯ ವಿಠಲ ಶಾಸ್ತ್ರೀ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಕಲಾವಿದ ವಿ.ಕೆ.ವಿಟ್ಲ, ನಾಟಕಕಾರ ಸದಾನಂದ ಮುಂಡಾಜೆ, ಯು ಪ್ಲಸ್ ವಾಹಿನಿ ದಿನೇಶ್ ಅವರನ್ನು ಪುರಸ್ಕರಿಸಲಾಯಿತು.

ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ನಾಯಕ್ ಅಜೇರು ಅವರ ಯಕ್ಷಗಾನ ಹಾಡುಗಳಿಗೆ ಸಂತೋಷ್ ಕುಮಾರ್ ಹಿಲಿಯಾನ, ರಕ್ಷಿತ್ ಶೆಟ್ಟಿ ಪಡ್ರೆ ಅವರ ಯಕ್ಷಗಾನ ನಾಟ್ಯ ವೈಭವಕ್ಕೆ ಚಿತ್ರ ಕಲಾವಿದ ವಿ.ಕೆ.ವಿಟ್ಲ ಚಿತ್ರ ಕಲೆ ಮೂಡಿಸಿ ರಂಜಿಸಿದರು. ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಮುರಾರಿ ಭಟ್ ಪಂಜಿ ಗದ್ದೆ ಸಹಕರಿಸಿದರು.

ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ಶಿವಾನಂದ ರಾವ್ ಕಕ್ಕೇನೇಜಿ, ರಿಷಿಕಾ ಕುಂದೇಶ್ವರ್ ಅವರ ತಂದೆ ಪತ್ರಕರ್ತ ಜಿತೇಂದ್ರ ಕುಂದೇಶ್ವರ್ ದಂಪತಿ ಉಪಸ್ಥಿತರಿದ್ದರು. ಪೂರನ್ ವರ್ಮ ಸ್ವಾಗತಿಸಿದರು. ಕುರಿಯ ವಿಠಲ ಶಾಸ್ತ್ರೀ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ ರಾವ್ ವಂದಿಸಿದರು.

ಪಾಶ್ಚಾತ್ಯ ಸಂಸ್ಕೃತಿಯ ನಡುವೆ ನೆಲದ ಸತ್ವ, ಶಕ್ತಿ ಸಾಂಸ್ಕೃತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ ಕೃಷಿ, ಶಿಕ್ಷಣ ತಜ್ಞರಾಗಿ ಡಾ.ಯಶೋವರ್ಮ ಸಂಸ್ಮರಣೀಯರು. ಅಂತರಂಗದ ವಿಕಸನಕ್ಕೆ ಪೂರಕವಾದ ಯಕ್ಷಗಾನ. ನಾಡಿನೆಲ್ಲೆಡೆ ಪಸರಿಸುತ್ತಿರುವ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯ ಅಭಿನಂದನೀಯ. ಡಾ.ಬಿ.ಎ.ಕುಮಾರ ಹೆಗ್ಡೆ, ಉಜಿರೆ ಎಸ್‌ಡಿಎಂ ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net