ಮೊದಲ ದಿನದ ಪ್ರಚಾರದಲ್ಲಿ ರಸ್ತೆ ಬದಿ ಚಾಯ್​ ಪೆ ಚರ್ಚಾ ನಡೆಸಿದ ಯದುವೀರ್​!

Mysore Kodagu
Published on

ಮೈಸೂರು: ಬುಧವಾರ ಪ್ರಕಟವಾದ 72 ಅಭ್ಯರ್ಥಿಗಳ ಬಿಜೆಪಿ ಎರಡನೇ ಪಟ್ಟಿಯಲ್ಲಿ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಹಾಲಿ ಸಂಸದ ಪ್ರತಾಪ್​ ಸಿಂಹಗೆ ಕೊಕ್​ ನೀಡಿ ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​ಗೆ ಬಿಜೆಪಿ ಮಣೆ ಹಾಕಿದ್ದು, ಮೊದಲ ದಿನವೇ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಟಿಕೆಟ್​ ಘೋಷಣೆಯಾಗುತ್ತಿದ್ದಂತೆ ಗುರುವಾರ ಸಾರ್ವಜನಿಕವಾಗಿ ಪ್ರಥಮ ಬಾರಿಗೆ ಕಾಣಿಸಿಕೊಂಡ ಯದುವೀರ್​ ಪಕ್ಷದ ನಾಯಕರು ಹಾಗೂ ಮುಖಂಡರೊಂದಿಗೆ ರಸ್ತೆ ಬದಿ ಚಹಾ ಸೇವಿಸಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಬಿಜೆಪಿ ಕಚೇರಿಗೆ ಮತ್ತು ಪಕ್ಷದ ನಾಯಕರ ಮನೆಗೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯರು ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು.

Mysore Kodagu

ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಕುತುಹಲ ಕೆರಳಿಸಿದ್ದ ಮೈಸೂರು- ಕೊಡಗು ಲೊಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕೊನೆಗೂ ಹೊರಬಿದ್ದಿದ್ದು, ನಿರೀಕ್ಷೆಯಂತೆ ರಾಜವಂಶಸ್ಥ ಯದುವೀರ್‌ ಒಡೆಯರ್‌ಗೆ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಎರಡು ಬಾರಿ ಗೆದ್ದಿರುವ ಹಾಲಿ ಸಂಸದ ಪ್ರತಾಪ್‌ ಸಿಂಹ ಅವರ ಬದಲು ಈ ಬಾರಿ ರಾಜವಂಶಸ್ಥರಿಗೆ ಮಣೆ ಹಾಕಲಾಗಿದೆ. 

ಮೈಸೂರು ಕ್ಷೇತ್ರದಲ್ಲಿ ರಾಜವಂಶಸ್ಥರು ಚುನಾವಣಾ ಅಖಾಡಕ್ಕಿಳಿಯುತ್ತಿರುವುದು ಇದೇ ಮೊದಲಲ್ಲ. ಮೈಸೂರು ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net