ಸಿಎಂ ಅಧ್ಯಕ್ಷತೆಯಲ್ಲಿ ಚಾಮುಂಡೇಶ್ವರಿ ಪ್ರಾಧಿಕಾರದ ಸಭೆ; ಇದು ಕಾನೂನು ಬಾಹಿರ ಎಂದ ರಾಜವಂಶಸ್ಥ ಯದುವೀರ್

Yaduveer Siddaramaiah
Published on

ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದ್ದು, ಈ ವಿಚಾರ ರಾಜವಂಶಸ್ಥ, ಸಂಸದ ಯದುವೀರ್​ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಇಂದು (ಸೆಪ್ಟೆಂಬರ್​ 03) ಸಭೆ ನಡೆಸಿದ್ದು, ಈ ಬಗ್ಗೆ ಸಂಸದ ಯದುವೀರ್​ ಟ್ವೀಟ್​ ಮಾಡಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರ ಪ್ರಾಧಿಕಾರದ ಸಭೆ ನಿಯಮ ಬಾಹಿರವಾಗಿದ್ದು, ಪ್ರಾಧಿಕಾರದಿಂದ ನಮ್ಮ ನಂಬಿಕೆ, ಆಚರಣೆ ಪರಂಪರೆಗೆ ಧಕ್ಕೆ ಬರುತ್ತೆ. ನಮ್ಮ ಹಕ್ಕನ್ನು ನಾವು ಯಾವತ್ತೂ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರಕಟಣೆಯನ್ನು ಸಹ ಪೋಸ್ಟ್​ ಮಾಡಿದ್ದಾರೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ 2024 ಪ್ರಸ್ತುತ ಕರ್ನಾಟಕದ ಗೌರವಾನ್ವಿತ ಹೈಕೋರ್ಟ್‌ನಲ್ಲಿ ಕಾನೂನು ಸವಾಲನ್ನ ಎದುರಿಸುತ್ತಿದೆ ಎಂಬುದನ್ನು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಮುಂದಿನ ಸೂಚನೆ ಬರುವವರೆಗೂ ಕಾಯಿದೆ ಜಾರಿ ಮಾಡಬಾರದು ಎಂದು ಮಧ್ಯಂತರ ಆದೇಶ ನೀಡಿದ್ದರೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಇಂದು ಸಭೆ ನಿಗದಿಯಾಗಿದೆ.

5ನೇ ಸೆಪ್ಟೆಂಬರ್ 2024 ರಂದು ಈ ವಿಷಯವನ್ನು ನ್ಯಾಯಾಂಗ ವಿಚಾರಣೆ ನಡೆಯಲಿದ್ದು ಕಾನೂನು ಪ್ರಕ್ರಿಯೆಯನ್ನು ಗೌರವಿಸಲು ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ. ನಿಮ್ಮ ಕಾನೂನನ್ನು ಎತ್ತಿಹಿಡಿಯುವಲ್ಲಿ ಮತ್ತು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ದೃಢವಾಗಿ ನಿಲ್ಲುತ್ತೇನೆ ಎಂದು ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಕರ್ನಾಟಕ ಸರ್ಕಾರ ಮತ್ತು ಮೈಸೂರು ರಾಜಮನೆತನದ ನಡುವೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. . ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಒಡೆಯರ್​ ಪರ ವಕೀಲರಿಗೆ ಸೂಚನೆ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್​ 5ಕ್ಕೆ ಮುಂದೂಡಿದೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಹೈಕೋರ್ಟ್‌ನಿಂದ ತಂದಿದ್ದ ತಡೆಯಾಜ್ಞೆ ತೆರವುಗೊಳಿಸಲಾಗಿದೆ. ಆದ್ದರಿಂದ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಪ್ರಾಧಿಕಾರದ ಮೊದಲ ಸಭೆಯನ್ನು ನಡೆಸುತ್ತಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ, ಪಿರಿಯಾಪಟ್ಟಣ ವೆಂಕಟೇಶ್​ ಕೂಡ ಸಭೆಯಲ್ಲಿ ಹಾಜರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net