ಯಾದಗಿರಿ: ನಗರ ಸೇರಿ ಜಿಲ್ಲೆಯ ಎಲ್ಲೆಡೆ ಸಂಚಾರ ನಿಯಮ ಪಾಲಿಸುವ ಮೂಲಕ ವಾಹನ ಚಲಾಯಿಸಿ ತಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಮರುಳುಸಿದ್ಧಾರಾಧ್ಯ ಜೆ.ಎಂ.ಸಾರ್ವಜನಿಕರಿಗೆ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ವಕೀಲ ಸಂಘ, ನ್ಯಾಯಾಂಗ ಇಲಾಖೆ, ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘ, ಕರ್ನಾಟಕ ಚಾಲಕರ ಸಂಘ, ಶಾಲಾ ಶಿಕ್ಷಣ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ನಗರಸಭೆ, ಶಶಿ ಚಾರಿಟೇಬಲ್ ಮತ್ತು ಏಜುಕೇಷನ್ ಟ್ರಸ್ಟ್ನಿಂದ ಇಲ್ಲಿನ ಚಿರಂಜೀವಿ ಶಾಲಾ ಆವರಣದಲ್ಲಿ ಗುರುವಾರ ಬೆಳಗ್ಗೆ ಆಯೋಜಿಸಿದ್ದ ಒಂದು ವಾರದ ಸಂಚಾರಿ ನಿಯಮ ಪಾಲನೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಸಂಚಾರ ನಿಯಮಗಳು ಪಾಲಿಸಬೇಕು. ಇದಕ್ಕೆಂದೇ ನಿಯಮ, ಕಾನೂನು ಕಟ್ಟಳೆಗಳಿವೆ. ಆದರೆ ಅವುಗಳಿಗೆ ಮಾನ್ಯತೆ ನೀಡದೆ ಮನಸ್ಸಿಗೆ ಬಂದಂತೆ ವಾಹನಗಳ ಚಲಾಯಿಸಿ ಬೆಲೆ ಕಟ್ಟಲಾಗದಂತಹ ಜೀವ ಕಳೆದುಕೊಳ್ಳುವುದು ಸರ್ವೆ ಸಾಮಾನ್ಯವಾಗಿದೆ ಎಂದು ವಿಷಾಧಿಸಿದರು.
ಆಟೋರಿಕ್ಷಾ ಸೇರಿ ಬೇರೆ, ಬೇರೆ ವಾಹನಗಳ ಚಾಲಕರು ನಿಯಮಗಳನ್ನು ಉಲ್ಲಂಘಸಿ ಚಲಾವಣೆ ಮಾಡುವುದರಿಂದ ಅನೇಕ ಸಲ ಅಮಾಯಕರು ಜೀವ ಕಳೆದುಕೊಳ್ಳುತ್ತಿರುವುದು ಕಾಣುತ್ತಿದ್ದೇವೆ. ಇನ್ಮುಂದೆ ಇವು ತಡೆಯಬೇಕು ಮತ್ತು ಪ್ರತಿಯೊಬ್ಬರೂ ನಿಯಮ ಪಾಲಿಸಬೇಕೆಂಬ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಆರಂಭದಲ್ಲಿ ಒಂದು ವಾರ ಹೀಗೆ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ನಂತರ ಪೊಲೀಸ್ ಇಲಾಖೆ ಮೂಲಕ ನಿಯಮ ಉಲ್ಲಂಘಸುವವರ ವಿರುದ್ಧ ದಂಡ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಕಾರಣ ಅಷ್ಟು ಮುಂದಕ್ಕೆ ಹೋಗದೇ ಎಲ್ಲರೂ ನಿಯಮ ಪಾಲಿಸಿ ಎಂದರು.
ಜಿಲ್ಲಾ ವಕೀಲ ಸಂಘದ ಸಿ.ಎಸ್.ಮಾಲಿಪಾಟೀಲ್, ಉಪಾಧ್ಯಕ್ಷ ದೇವೆಂದ್ರಪ್ಪ ಯರಗೋಳ, ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಎಂ.ಚಟ್ಟನಳ್ಳಿ, ಆಟೋರಿಕ್ಷಾ ಚಾಲಕರ ಟಕದ ಜಿಲ್ಲಾ ಗೌರವಾಧ್ಯಕ್ಷ ಲಿಂಗಪ್ಪ ಬಿರನಾಳ, ಆಟೋರಿಕ್ಷಾ ಚಾಲಕರ ಸಂದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾಂಗ್ಲಿಯಾನ ಮಾತನಾಡಿದರು. ನ್ಯಾಯಾಧೀಶರಾದ ಎ.ಈರಣ್ಣ, ಬಾಳಾ ಸಾಹೇಬ್ ವಡವಡೆ, ಅರುಣ ಚೌಗಲೆ, ಜಗಧೀಶ ಕಿತ್ತೂರ, ಆರ್ಟಿಒ ಮಿಲಿಂದಕುಮಾರ, ಹೆಚ್ಚುವರಿ ಎಸ್ಪಿ ಧರಣೇಶ, ಡಿವೈಎಸ್ಪಿ ಸುರೇಶ ನಾಯಕ, ಸಂಚಾರಿ ಪಿಎಸ್ಪಿ ಗಂಗಾ ಭದ್ರಾಪುರ, ಶಶಿ ಚಾರಿಟೇಬಲ್ ಮತ್ತು ಏಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗೋಳ, ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ,ಜಿಲ್ಲಾ ವಕೀಲ ಸಂಘದ ಪದಾಧಿಕಾರಿಗಳು ಸೇರಿದಂತೆಯೇ ಇತರರಿದ್ದರು. ಚಿರಂಜೀವಿ ಶಾಲೆಯಿಂದ ಆರಂಭವಾದ ಅಭಿಯಾನದ ಪಾದಯಾತ್ರೆ ಹೊಸ ಬಸ್ ನಿಲ್ದಾಣ, ಶಾಸ್ತ್ರಿ ಚೌಕ್, ಸುಭಾಷ ಸರ್ಕಲ್ ಮಾರ್ಗವಾಗಿ ವಾಪಸ್ ಶಾಲಾ ಆವರಣಕ್ಕೆ ಆಗಮಿಸಿ ಮುಕ್ತಾಯಗೊಂಡಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಸಂಚಾರಿ ನಿಯಮ ಪಾಲಿಸಿ ಜೀವ ಉಳಿಸಿಕೊಳ್ಳಿ. ಕಾರಣ ನಿಮ್ಮನ್ನೇ ನಂಬಿ ತಾಯಿ-ತಂದೆ, ಹೆಂಡತಿ ಮತ್ತು ಮಕ್ಕಳು ಇರುತ್ತಾರೆ. ಹೆಲ್ಮೇಟ್ ಧರಿಸಿದೆ, ಸಿಟ್ಬೆಲ್ಟ್ ಹಾಕಿಕೊಳ್ಳದೆ ವಾಹನ ಚಲಾಯಿಸಿ ಅಪಘಾತಕ್ಕೆ ಒಳಗಾಗಿ ಜೀವ ಕಳೆದುಕೊಂಡರೆ ಕುಟುಂಬಗಳು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು. ಅಪಘಾತಗಳಲ್ಲಿ ಅಂಗಗಳನ್ನು ಕಳೆದುಕೊಂಡರೆ ಜೀವನವೇ ನರಕವಾಗುತ್ತದೆ. ಈ ನಿಟ್ಟಿನಲ್ಲಿ ಒಂದು ವಾರದ ಅಭಿಯಾನ ಸಾಕಷ್ಟು ಜನರಿಗೆ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.
ಹಲವಾರು ರೀತಿಯ ನಿಯಮಗಳು ಉಲ್ಲಂಘನೆ
ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶ ಮರಿಯಪ್ಪ ಮಾತನಾಡಿ, ನಗರ ಸೇರಿ ಜಿಲ್ಲೆಯಲ್ಲಿ 18 ವರ್ಷದೊಳಗಿನ ಸಾವಿರಾರು ಮಕ್ಕಳು ವಾಹನ ಚಲಾಯಿಸುವುದು ಕಾಣುತ್ತದೆ. ಒಂದೇ ವಾಹನದಲ್ಲಿ 3-4 ಜನರು ಕುಳಿತು ಸಾಗುವುದು, ಗ್ರಾಮೀಣ ಭಾಗದಲ್ಲಿ ಗೂಡ್ಸ್ ವಾಹನಗಳಲ್ಲಿ ಒಳಗೂ, ಮೇಲು ಕುರಿ ತುಂಬಿದಂತೆ ಜನರನ್ನು ತುಂಬಿಕೊಂಡು ಹೋಗುವುದು ನಿರಂತರವಾಗಿ ನಡೆಯುತ್ತಿದೆ. ಇದು ಈಗಿನಿಂದಲೇ ನಿಲ್ಲಬೇಕು.
ಸಿಂಗ್ನಲ್ ಜಂಪ್ ಮಾಡುವುದು, ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿ ರಸ್ತೆ ಸಂಚಾರಕ್ಕೆ ತೊಂದರೆ ಕೊಡುವುದು ನಿರಂತರವಾಗಿ ರಾಂಗ್ ಸೈಡ್ ಚಲಾಯಿಸಿಕೊಂಡು ಹೋಗುವುದು, ಮದ್ಯ ಸೇವಿಸಿ ವಾಹನ ಚಲಾಯಿಸುವುದು, ಯೂನಿಫಾಮ್ರ್ ಹಾಕಿಕೊಳ್ಳದೆ ಆಟೋ ಓಡಿಸುವುದು, ಒಂದೇ ಆಟೋದಲ್ಲಿ ಹೆಚ್ಚಿನ ಜನ ಕೂಡಿಸಿಕೊಳ್ಳುವುದು, ಓವರ್ ಸ್ಪೀಡ್ಆಗಿ ನಡೆಸುವುದು ಹೀಗೆ ಹಲವಾರು ತಪ್ಪುಗಳನ್ನು ಮಾಡಿ ನಿಯಮ ಉಲ್ಲಂಘಸಿ ದಂಡ ಕಟ್ಟುವುದು ಮತ್ತು ಜೀವ ಕಳೆದುಕೊಳ್ಳುವುದು ನಿತ್ಯ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದು ನಿಲ್ಲಬೇಕು ಎನ್ನುವ ಏಕೈಕ ಕಾರಣಕ್ಕಾಗಿಯೇ ಈ ಕೆಲಸಕ್ಕೆ ಮುಂದಾಗಲಾಗಿದೆ ಎಂದರು.