

ಯಾದಗಿರಿ: ಮಹಾಮಾರಿ ಕರೊನಾ ವೈರಸ್ ನಿಯಂತ್ರಿಸಲು ಲಾಕ್ಡೌನ್ ಹೇರಿರುವ ಸಮಯದಲ್ಲಿ ಜನರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯುವುದು ಸಾಮಾನ್ಯ. ಜನರು ಸರ್ಕಾರ ಮತ್ತು ಪೊಲೀಸರನ್ನು ಶಪಿಸುವುದು ಕೂಡ ಸಾಮಾನ್ಯವಾಗಿದೆ.
ಹೀಗಿರುವಾಗ ಇಲ್ಲೊಬ್ಬ ಪೊಲೀಸ್ ಪೇದೆ ಬಡವರ ಹಸಿವು ನೀಗಿಸುವ ಜತೆಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ. ವಿಶೇಷವಾಗಿ ಕೋವಿಡ್ ಜಾಗೃತಿ ಕಾರ್ಯಕ್ರಮ ಮೂಲಕ ಗಮನ ಸೆಳೆದಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ಠಾಣೆಯ ಪೊಲೀಸ ಪೇದೆ ದಯಾನಂದ ಅವರಿಂದ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಡಜನರಿಗೆ, ನಿರ್ಗತಿಕರಿಗೆ ಆಹಾರ ವಿತರಣೆಯಾಗುತ್ತಿದೆ.
ಅದೇ ರೀತಿ ಗ್ರಾಮೀಣ ಭಾಗಕ್ಕೆ ತೆರಳಿ ಕೋವಿಡ್ ಮುಂಜಾಗ್ರತೆ ವಹಿಸಲು ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್ ವಿತರಣೆಯ ಜತೆಗೆ ಸಾಮಾಜಿಕ ಅಂತರ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಕೂಡ ಕರೊನಾ ಎರಡನೇ ಅಲೆಯಿಂದ ಗ್ರಾಮೀಣ ಭಾಗದಲ್ಲಿ ದಿನ ನಿತ್ಯವೂ ಕರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ದಯಾನಂದ ಅವರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)