

ಬಾಗಲಕೋಟೆ: ಮಾಜಿ ಸಚಿವ ಅತ್ಯುತ್ತಮ ಸಂಸದೀಯಪಟು ಎಸ್.ಆರ್.ಪಾಟೀಲ ಅವರಿಗೆ ವಿಧಾನ ಪರಿಷತ್‌ನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
೨೦೨೧ನೇ ಸಾಲಿನ ಅತ್ಯುತ್ತಮ ವಿಧಾನ ಪರಿಷತ್ ಶಾಸಕ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕರ್ನಾಟಕ ವಿಧಾನ ಪರಿಷತ್ ಜು.೧೮ ರಂದು ಸಂಜೆ ೬ ಗಂಟೆಗೆ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ, ನಾಯಕರಾಗಿ, ಪರಿಷತ್ ಸದಸ್ಯರಾಗಿ, ಸಚಿವರಾಗಿ, ಪಕ್ಷದ ಕಾರ್ಯಾಧ್ಯಕ್ಷರಾಗಿ, ಪ್ರತಿಪಕ್ಷದ ನಾಯಕರಾಗಿ ಎಸ್.ಆರ್.ಪಾಟೀಲ ಅವರು ಸೇವೆ ಸಲ್ಲಿಸಿದ್ದಾರೆ.
ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಎಸ್.ಆರ್.ಪಾಟೀಲ ೧೯೮೭ ರಿಂದ ಜಿಲ್ಲಾ ಪಂಚಾಯಿತಿ ಮೂಲಕ ರಾಜಕಾರಣದಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಅಖಂಡ ವಿಜಯಪುರ ಜಿಲ್ಲೆಯ ಜಿಲ್ಲಾ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದರು. ಎಸ್.ಆರ್.ಪಾಟೀಲ ಬಾಗಲಕೋಟೆ ಪಟ್ಟಣ ಪ್ರಾಽಕಾರದ ಅಧ್ಯಕ್ಷರಾಗಿ ೧೯೯೪ ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ರಾಜಕೀಯ ಬೆಳವಣಿಗೆ ನಡೆದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಧಾನಪರಿಷತ್ತನ್ನು ಪ್ರವೇಶಿಸಿದ ಎಸ್.ಆರ್.ಪಾಟೀಲ ಎರಡು ದಶಕಗಳಕಾಲ ವಿ.ಪ ಸದಸ್ಯರಾಗಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
೨೦೨೧ ಅಂತ್ಯದಲ್ಲಿ ನಡೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿಲ್ಲ. ೨೦೨೩ ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬೀಳಗಿ ಅಥವಾ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಟಿಕೆಟ್ ಕೊಡುವುದಾಗಿ ಹೇಳಿ ಕೊನೆ ಘಳಿಗೆಯಲ್ಲಿ ತಪ್ಪಿತ್ತು. ಇದೇ ಕಾರಣಕ್ಕೆ ಅವರ ಬೆಂಬಲಿಗರಲ್ಲಿ ನೋವು ಮನೆ ಮಾಡಿದೆ. ಸದ್ಯ ಪ್ರಶಸ್ತಿ ದೊರೆತಿರುವುದಕ್ಕೆ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.