

*ಮಾಗಡಿ ತಾಲೂಕು ಕಚೇರಿಯ ರೆಕಾರ್ಡ್ಸ್ ರೂಂನ ದುಸ್ಥಿತಿ
* ನಿತ್ಯ ನಾಗರಿಕರ ಅಲೆದಾಟ
ಮಾಗಡಿ
ಜೆರಾಕ್ಸ್ ಮಷಿನ್ಗೆ ಟೋನರ್ ಹಾಕುವಷ್ಟು ಕಾಸಿಲ್ಲದೇ ಮಾಗಡಿ ತಾಲೂಕು ಕಚೇರಿ ದಿವಾಳಿಯಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ರೆಕಾರ್ಡ್ಸ್ ರೂಂನಲ್ಲಿ ನಕಲು ಪ್ರತಿಗಳನ್ನು ನಾಗರಿಕರಿಗೆ ನೀಡಲು ಜೆರಾಕ್ಸ್ ಮಷಿನ್ನ ಟೋನರ್ ಖಾಲಿಯಾಗಿದೆ ಎಂದು ತಹಸೀಲ್ದಾರ್ ಸಹಿಯ ಬೋರ್ಡ್ ಹಾಕಿರುವುದು ತಾಲೂಕು ಕಚೇರಿಯ ಆಡಳಿತದ ಕಾರ್ಯವೈಖರಿಯನ್ನು ಅಣಕಿಸುವಂತಿದೆ.
ರೈತರಿಗೆ ಸಂಬಂಧಿಸಿದ ಒಂದು ಹಳೆಯ ನಕಲು ಪ್ರತಿ ನೀಡಲು ತಲಾ ಒಂದು ಪ್ರತಿಗೆ 20 ರೂ. ಪಡೆಯುತ್ತಾರೆ. ಈ ಹಣದಿಂದ ರೆಕಾರ್ಡ್ ರೂಂನ ಹಾಗೂ ಜೆರಾಕ್ಸ್ ಮಷಿನ್ ಸೇರಿ ಇನ್ನಿತರ ನಿರ್ವಹಣೆ ಮಾಡಬಹುದು. ಆದರೆ, ನಿರ್ವಹಣೆ ವಹಿಸಿರುವವರು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಬೇಕಾದವರನ್ನು ರೆಕಾರ್ಡ್ ರೂಂಗೆ ಕರೆಸಿ ಅವರಿಗೆ ಬೇಕಾದ ದಾಖಲೆ ನೀಡುತ್ತಿದ್ದು, ಹಣ ನೀಡದವರಿಗೆ ವಾರಗಟ್ಟಲೆ ಅಲೆಸುತ್ತಿದ್ದಾರೆ ಎಂಬ ಆರೋಪವಿದೆ.
ಈ ಬಗ್ಗೆ ಪ್ರಶ್ನಿಸಿದರೆ ದಾಖಲೆಗಳು ಸಿಗುತ್ತಿಲ್ಲ, ಹುಡುಕಲು ಸಿಬ್ಬಂದಿ ಇಲ್ಲ, ನಾಳೆ ಬನ್ನಿ ಎಂಬ ಉಢಾಪೆ ಉತ್ತರ ಕೊಡುತ್ತಾರೆ. ನಾನು ಶಾಸಕರ ಸಂಬಂಧಿ, ಯಾರಿಗೆ ಹೇಳುತ್ತೀಯಾ ಹೇಳಿಕೋ ಎಂಬ ದರ್ಪ ತೋರುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಹಳೆಯ ದಾಖಲೆ ಪಡೆಯಲು 15 ದಿನಗಳಿಂದ ಬರುತ್ತಿದ್ದೇನೆ. ಸದಾಕಾಲ ರೆಕಾರ್ಡ್ಸ್ ರೂಂನ ಕಿಟಕಿ, ಬಾಗಿಲು ಮುಚ್ಚಿರುತ್ತದೆ. ಇದನ್ನು ನೋಡಿ ವಾಪಸ್ ತೆರಳುವಂತಾಗಿದೆ.
> ನರಸಿಂಹಯ್ಯ, ರೈತ ದಂಡಿಗೆ ಪುರ
ಎಲ್ಲರೂ ದಾಖಲೆಗಳನ್ನು ಒಮ್ಮಲೆ ಕೊಡಿ ಎನ್ನುತ್ತಾರೆ. ಆದ್ದರಿಂದ ಟೋನರ್ ಖಾಲಿ ಆಗಿದೆ ಸಹಕರಿಸಿ ಎಂದು ಹಾಕಲಾಗಿದೆ. ಈಗ ದಾಖಲಾತಿ ನೀಡಲು ಸಹಿ ಹಾಕಿದ್ದೇನೆ.
> ಪ್ರಭಾಕರ್ ಗ್ರೇಡ್ 2 ತಹಸೀಲ್ದಾರ್.