

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು, ಗ್ರಾಮಸ್ಥರು ಮಳೆಗಾಗಿ ದೇವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಮ.ಬೆಟ್ಟದ ಭಾಗವು ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು ಇಲ್ಲಿನ ರೈತರು ಹೆಚ್ಚಾಗಿ ಖುಷ್ಕಿ ಭೂಮಿಯನ್ನು ಹೊಂದಿದ್ದಾರೆ. ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ರಾಗಿ, ಅವರೆ ಹಾಗೂ ಅಲಸಂದೆ ಬೆಳೆಯುತ್ತಾರೆ. ಒಂದೂವರೆ ತಿಂಗಳ ಹಿಂದೆ ಬಿತ್ತನೆ ಮಾಡಲಾಗಿದ್ದು ಪೈರುಗಳು ಬಂದಿವೆ. ಆದರೆ, 20 ದಿನಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ಪೈರುಗಳು ಒಣಗುತ್ತಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ. ಮಳೆಯಾಗದ ವರ್ಷದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕತ್ತಿಪವಾಡ ಹಳ್ಳದ ಹೊಸಕೊಳಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸುವುದು ಹಿಂದಿನಿಂದಲೂ ವಾಡಿಕೆಯಲ್ಲಿದೆ.
ಬೆಳಗ್ಗೆ ಬೇಡಗಂಪಣ ಅರ್ಚಕರು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಸತ್ತಿಗೆ, ಸೂರಿಪಾನಿ, ನಂದಿಕಂಬ, ಜಾಗಟೆಯೊಂದಿಗೆ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ಶಿವ-ಪಾರ್ವತಿಯ ಉತ್ಸವ ಮೂರ್ತಿಯನ್ನು ನಂದಿ ವಾಹನದಲ್ಲಿ ಕೂರಿಸಿ ತಂಬಡಿಗೇರಿಯ ಕತ್ತಿಪವಾಡ ಹಳ್ಳದ ಹೊಸಕೊಳದ ಮರದ ಬಳಿ ಮೆರವಣಿಗೆ ಮೂಲಕ ಕೊಂಡೊಯ್ದು ಮಳೆಗಾಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬಳಿಕ ನೆರೆದಿದ್ದವರಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮ.ಬೆಟ್ಟ ಸೇರಿದಂತೆ ಸುತ್ತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.