

ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಬಡಾವಣೆಯಲ್ಲಿರುವ ಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಮಹಿಳೆಯರು ಪಂಚರತ್ನ ಕೃತಿಗಳನ್ನು ಸ್ಮರಿಸಿ ತ್ಯಾಗರಾಜ ಆರಾಧನೆ ನಡೆಸಿದರು.
1200 ವರ್ಷಗಳ ಇತಿಹಾಸ ಪ್ರಸಿದ್ಧ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ಮತ್ತು ನಾರಾಯಣಸ್ವಾಮಿ ಗುಡಿಗಳಿವೆ. ನಿತ್ಯವೂ ದೇವರಿಗೆ ಪೂಜೆ ಕೈಂಕರ್ಯ ನೆರವೇರುತ್ತದೆ. ಪ್ರತಿ ದಿನ ಭಕ್ತರಿಗೆ ದರ್ಶನವಿರುತ್ತದೆ. ಈ ದೇವಾಲಯದಲ್ಲಿ ಲಕ್ಷ್ಮೀ ದೇವಿಗೆ ಎಡ ಕೈಯಲ್ಲಿ ಆರು ಬೆರಳು ಇರುವುದು ವಿಶೇಷವಾಗಿದೆ.
ಸ್ವರ ಭಾರತಿ ತಂಡ ಪ್ರತಿ ವರ್ಷವೂ ಲಕ್ಷ್ಮೀ ದೇವಾಲಯದಲ್ಲಿ ತ್ಯಾಗರಾಜನ ಆರಾಧನೆಯನ್ನು ನಡೆಸಿಕೊಂಡು ಬಂದಿದೆ. ಬೆಳಗ್ಗೆಯಿಂದಲೇ ನಾರಾಯಣಸ್ವಾಮಿ ಹಾಗೂ ಲಕ್ಷ್ಮೀ ಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ ಮಾಡಲಾಯಿತು. ವಿವಿಧ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ವೇದ ಪಾರಾಯಣ ನಡೆಸಲಾಯಿತು. ನಂತರ, ಲಕ್ಷ್ಮಿ ದೇವಾಲಯ ಮುಂಭಾಗ ಸ್ವರ ಭಾರತಿ ತಂಡದ ಭಾರತಿ ಅವರು ಬೆಳಗ್ಗೆ 11 ರಿಂದ 1 ಗಂಟೆವರೆಗೆ ಮಹಿಳೆಯರಿಗೆ ಪಂಚರತ್ನ ಕೃತಿಗಳನ್ನು ಬೋಧಿಸಿದರು. ಬೆಂಗಳೂರು, ತುಮಕೂರು, ಚಾಮರಾಜನಗರ, ಮೈಸೂರು ಭಾಗಗಳಿಂದಲೂ ಮಹಿಳೆಯರು ಆಗಮಿಸಿ ತ್ಯಾಗರಾಜನ ಆರಾಧನೆ ಮಾಡಿದರು. ಮಧ್ಯಾಹ್ನ ಪ್ರಸಾದ ವಿನಿಯೋಗ ಮಾಡಲಾಯಿತು.
ಲಕ್ಷ್ಮೀದೇವಿಗೆ ಆರು ಬೆರಳು: ದೇವಾಲಯದಲ್ಲಿ ಲಕ್ಷ್ಮೀ ದೇವರ ಎಡಗೈಯಲ್ಲಿ ಆರು ಬೆರಳಿರುವುದು ಬಹಳ ವಿಶೇಷವಾಗಿದೆ. ಹೆಣ್ಣು ಮಕ್ಕಳಿಗೆ ಎಡಗೈನಲ್ಲಿ ಆರು ಬೆರಳಿದ್ದರೆ ಅದೃಷ್ಟ ಎಂಬುದು ನಂಬಿಕೆ. ಈರೀತಿ ಇರುವುದು ಅಪರೂಪವೂ ಹೌದು. ದೇವಾಲಯದಲ್ಲಿ ಲಕ್ಷ್ಮೀ ತಾಯಿಗೆ ಆರು ಬೆರಳಿರುವುದರಿಂದ ಮಹಿಳೆಯರು ಶ್ರದ್ಧಾ-ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿದರೆ ಕೋರಿಕೆಗಳು ಈಡೇರುತ್ತದೆ ಎಂಬುದು ನಂಬಿಕೆಯಿದೆ.
ರೂಪಾ ಸತೀಶ್, ಶೈಲಾ ವೆಂಕಟೇಶ್, ಪದ್ಮಾ ನಾಗೇಂದ್ರ, ಲಲಿತಾ ನಾಗರಾಜು, ಸಂಧ್ಯಾ ಬಾಬು, ವಸುಂಧರಾ ರಂಗನಾಥ್, ಸುಜಾತಾ, ರಾಮರತ್ನ ಮತ್ತಿತರಿದ್ದರು.