

ಸೋಮವಾರಪೇಟೆ: ಕರ್ನಾಟಕ ಗೋ ಸೇವಾ ಗತಿವಿಧಿಯ ನೇತೃತ್ವದಲ್ಲಿ ಬಂಟ್ವಾಳದ ರಾಧಾ ಸುರಭಿ ಗೋ ಮಂದಿರ, ಗೋ ಸೇವಾ ಸಂಸ್ಥಾನದಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ನಂದಿ ರಥಯಾತ್ರೆಯೂ ಮಂಗಳವಾರ ಸಂಜೆ ತೊರೆನೂರು ಗ್ರಾಮ ಪಂಚಾಯಿತಿಯ ಸಿದ್ದಲಿಂಗಪುರ, ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭ ಪೂಜೆ ಸಲ್ಲಿಸಲಾಯಿತು.
ದೇವಾಲಯದ ಪ್ರಧಾನ ಗುರು ಶ್ರೀ ರಾಜೇನಾಥ್ ಜೀ ಅವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ವದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.
ಅರಸಿನಕುಪ್ಪೆ ಗ್ರಾಮದ ಮಹಿಳೆಯರು ರಥಯಾತ್ರೆಗೆ ಆರತಿ ಬೆಳಗಿ, ಕಳಸದೊಂದಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಮೆರವಣಿಗೆ ತೆರಳಿದರು. ನಂತರ ದೇವಾಲಯ ಆವರಣದಲ್ಲಿ ಜೋಡಿ ನಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾರ್ವಜನಿಕ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ನಂದಿ ರಥಯಾತ್ರೆಯ ಪ್ರಧಾನ ಕಾರ್ಯದರ್ಶಿ ನವೀನ್ ಮಾರ್ಲ, ಜಿಲ್ಲಾ ಗೋ ಸೇವಾ ಗತಿವಿಧಿ ಸಂಚಾಲಕ ಪ್ರದೀಪ್ ಅವರು ರಥಯಾತ್ರೆಯ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರದ ಗುರುಗಳಾದ ರಾಜೇಶ್‌ನಾಥ್ ಜೀ ಅವರು, ಗೋವಿನ ಸಂರಕ್ಷಣೆಯಲ್ಲಿ ಇಡಿ ಸಮಾಜ ಜವಾಬ್ದಾರಿ ಹೊರಬೇಕು. ಗೋ ಪಾಲಕರಿಗೆ ಸಹಕಾರ ನೀಡಬೇಕೆಂದು ಕರೆ ನೀಡಿದರು.