

ಸರಗೂರು: ಸುಂದರ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಕಾರ್ಮಿಕರಿಗೆ ಗೌರವಯುತ ಬದುಕು ಕಟ್ಟಿಕೊಡಬೇಕು ಎಂದು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಚಯ್ಯ ಹೇಳಿದರು.
ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ತಮ್ಮ ವೃತ್ತಿಯ ಬಗ್ಗೆ ಹೆಮ್ಮೆ ಮೂಡುವ ನಿಟ್ಟಿನಲ್ಲಿ ಕಾರ್ಮಿಕರ ದಿನಾಚರಣೆಯನ್ನು ಹಬ್ಬದ ರೂಪದಲ್ಲಿ ಆಚರಿಸುವ ಮೂಲಕ ಕಾರ್ಮಿಕ ವಲಯಕ್ಕೆ ಸೂಕ್ತ ಗೌರವವನ್ನು ನೀಡಬೇಕಿದೆ. ಕಾರ್ಮಿಕರ ದಿನವನ್ನು ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ಎಲ್ಲರಿಗೂ ನ್ಯಾಯಯುತ ಮತ್ತು ನ್ಯಾಯಯುತ ಕೆಲಸದ ಪರಿಸ್ಥಿತಿಗಳಿಗಾಗಿ ಹೋರಾಟದಲ್ಲಿ ಸಾಧಿಸಿದ ಪ್ರಗತಿ ಮತ್ತು ಉಳಿದಿರುವ ಸವಾಲುಗಳನ್ನು ಪ್ರತಿಬಿಂಬಿಸುವ ದಿನವಾಗಿದೆ ಎಂದು ಹೇಳಿದರು.
ಸಂಘದ ಮಾಜಿ ಉಪಾಧ್ಯಕ್ಷ ಪುಟ್ಟಹನುಮಯ್ಯ ಮಾತನಾಡಿ, ಕಾರ್ಮಿಕರು ಇಲ್ಲದಿರುವ ಜಗತ್ತನ್ನು ಊಹಿಸುವುದಕ್ಕೆ ಸಾಧ್ಯವಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮಪಟ್ಟು ದುಡಿಯುವ ಕೆಲಸಗಾರರು ದೇಶ, ರಾಜ್ಯದ ಅಭಿವೃದ್ಧಿಗೆ ಹೆಗಲು ಕೊಡುತ್ತಾರೆ. ಇಂತಹ ಶ್ರಮಜೀವಿಗಳ ಪ್ರಯತ್ನ, ಕೆಲಸದಲ್ಲಿಯೇ ದೇಶದ ಅಭಿವೃದ್ಧಿ ಅಡಗಿದೆ. ಹೀಗೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಕಾರ್ಮಿಕರ ಶ್ರಮ ಮತ್ತು ಸೇವೆಯನ್ನು ಗೌರವಿಸುವ, ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವ ದಿನ ಎಂದು ಹೇಳಿದರು.
ಈ ವೇಳೆ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ನಂಜುಂಡ ಶೆಟ್ಟಿ, ಉಪಾಧ್ಯಕ್ಷ ಬೋಗಯ್ಯ, ಪ್ರಧಾನ ಕಾರ್ಯದರ್ಶಿ ರಮೇಶ್, ಖಜಾಂಚಿ ಚಿಕ್ಕನಾಯಕ, ಮಾಜಿ ಅಧ್ಯಕ್ಷರು ಶಿವರಾಜು, ಶ್ರೀನಿವಾಸ, ಸದಸ್ಯ ಗೊವಿಂದರಾಜು, ಮಾಜಿ ಉಪಾಧ್ಯಕ್ಷ ಪುಟ್ಟಹನುಮಯ್ಯ, ಬಸವರಾಜು, ಸಿದ್ದಪ್ಪ, ಆದಿಶೇಷ, ಮಹಾದೇವ, ನಾಗರಾಜು, ಸತೀಶ್, ಎಸ್.ಎಸ್.ಪ್ರಕಾಶ್, ಮಹದೇವಸ್ವಾಮಿ, ಕಾಳೆಗೌಡನಹುಂಡಿ ಸಿದ್ದರಾಜು, ಎಸ್.ಕೆ.ರಾಜಣ್ಣ, ಪಿ ಶಿವಣ್ಣ, ಹೆಜ್ಜೂರ ಪ್ರಸಾದ್, ಸ್ವಾಮಿ, ಆರ್.ಮಹೇಶ್, ಪ್ರತಾಪ್ ಇದ್ದರು.