

ಬೆಂಗಳೂರು: ಹೋಮಿಯೋಪಥಿ ಪದ್ಧತಿಯಲ್ಲೂ ಟೆಲಿ ಮೆಡಿಸಿನ್ ವ್ಯವಸ್ಥೆ ಸಮರ್ಪಕವಾಗಿ ಬಳಕೆಯಾಗಬೇಕು. ಆ ಮೂಲಕ ರೋಗಿಗಳಿಗೆ ಸುಲಭ ಹಾಗೂ ತ್ವರಿತ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ವಿಶ್ವ ಹೋಮಿಯೋಪಥಿ ದಿನಾಚರಣೆ ಅಂಗವಾಗಿ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಖಾಸಗಿ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಮಾತನಾಡಿದರು.
ಹೋಮಿಯೋಪಥಿ ಚಿಕಿತ್ಸಾ ಪದ್ಧತಿ ಜರ್ಮನಿ ಮೂಲದ್ದಾದರೂ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದೆ. ತನ್ನತನವನ್ನು ಕಾಪಾಡಿಕೊಂಡು ಬರುತ್ತಿದೆ. ಯಾವುದೇ ಅಡ್ಡ ಪರಿಣಾಮಗಳು ಇಲ್ಲದ ಈ ವೈದ್ಯಕೀಯ ಪದ್ಧತಿಯ ಕುರಿತು ನಿರಂತರ ಸಂಶೋಧನೆ ನಡೆಸುವ ಮೂಲಕ ಈ ಕ್ಷೇತ್ರವನ್ನು ಮತ್ತಷ್ಟು ವಿಸ್ತಾರಗೊಳಿಸಲು ಸಾಧ್ಯ. ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಹಿರಿದಾಗಿದೆ ಎಂದರು.
ನಕಲಿ ವೈದ್ಯರ ವಿರುದ್ಧ ಕ್ರಮ: ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ, ಈ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಕಾನೂನು ಕ್ರಮಗಳನ್ನು ಮತ್ತುಷ್ಟು ಬಿಗಿಗೊಳಿಸಲಾಗುವುದು ಎಂದ ಅವರು, ಹೋಮಿಯೋಪತಿ ಹಾಗೂ ಅಲೋಪತಿ ಬ್ರಿಜ್ ಕೋರ್ಸ್ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಹಾಗು ಕೇಂದ್ರ ಸರ್ಕಾರ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಕಾನೂನಿನ ಚೌಕಟ್ಟಿನಲ್ಲಿ ಕ್ರಮ: ಹಲವು ಟೀಕೆಗಳ ನಡುವೆಯೇ ಹೋಮಿಯೋಪಥಿ ಚಿಕಿತ್ಸಾ ಪದ್ಧತಿ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಈ ಪದ್ಧತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು. ಹೋಮಿಯೋಪಥಿ ಮತ್ತು ಅಲೋಪಥಿ ಪದ್ಧತಿಗಳನ್ನು ಸಂಯೋಜಿಸುವ ಬೇಡಿಕೆ ಬಗ್ಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಹೋಮಿಯೋಪತಿಯ ಪ್ರತಿನಿಧಿಯೊಬ್ಬರನ್ನು ಸಿಂಡಿಕೇಟ್ ಸದಸ್ಯನಾಗಿ ನೇಮಿಸಬೇಕು ಎಂಬ ಸಂಘದ ಬೇಡಿಕೆಗೆ ವೈದ್ಯಕೀಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಹೋಮಿಯೋಪಥಿ ವೈದ್ಯಕೀಯ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಡಾ. ಆನಂದ್ ಕುಲಕರ್ಣಿ, ಕರ್ನಾಟಕ ಖಾಸಗಿ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜುಗಳ ಆಡಳಿತ ಸಂಘದ ಅಧ್ಯಕ್ಷ ವಿನೋದ್ ದೊಡ್ಡಣ್ಣನವರ್, ಪ್ರಧಾನ ಕಾರ್ಯದರ್ಶಿ ಕೆ. ಚಂದ್ರಶೇಖರ್ ಇತರರಿದ್ದರು.