

ಬೆಂಗಳೂರು: ಕಾವೇರಿಗಾಗಿ ನಡೆದ ಕರ್ನಾಟಕ ಬಂದ್ ನಡುವೆಯೂ ನಗರದ ಪ್ರಮುಖ ಆಸ್ಪತ್ರೆಗಳು ಶುಕ್ರವಾರ ಸಾಂಕೇತಿಕವಾಗಿ ವಿಶ್ವ ಹೃದಯ ದಿನವನ್ನು ಆಚರಿಸುವ ಮೂಲಕ ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸಿದವು.
ಬಂದ್ ಇದ್ದರೂ ವೈದ್ಯರು, ಶುಶ್ರೂಷಕರು ಹಾಗೂ ವೈದ್ಯಕೀಯ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗಲಿಲ್ಲ. ಆದರೆ, ಬಂದ್ ನಿಂದಾಗಿ ನಗರ ಸೇರಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ರೋಗಿಗಳು ಆಗಮಿಸದ ಕಾರಣ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಬಹುತೇಕ ಕಡಿಮೆಯಿತ್ತು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ನಾರಾಯಣ ಹೆಲ್ತ್, ೆರ್ಟಿಸ್, ಆಸ್ಟರ್, ಮಣಿಪಾಲ್, ಅಪೋಲೊ ಸೇರಿ ನಗರದ ಪ್ರಮುಖ ಆಸ್ಪತ್ರೆಗಳು ಹೃದಯ ಸಮಸ್ಯೆ ಪತ್ತೆಗೆ ಆದ್ಯತೆ ನೀಡಿ ನಿಯಮಿತ ಹೃದಯ ಆರೋಗ್ಯ ತಪಾಸಣೆ ಹಾಗೂ ಆರೋಗ್ಯಕರ ಹೃದಯಕ್ಕಾಗಿ ವ್ಯಾಯಾಮ ಕುರಿತು ತಿಳುವಳಿಕೆ ಮೂಡಿಸಿದವು.
ಮಣಿಪಾಲ್ ಆಸ್ಪತ್ರೆಗಳ ಸಮೂಹವು ನಗರದ ವಿವಿಧ ವೃತ್ತಗಳಲ್ಲಿ ತುರ್ತು ಸಹಾಯ (ಎಸ್‌ಒಎಸ್) ಕ್ಯೂಆರ್ ಕೋಡ್ ಫಲಕವನ್ನು ಅಳವಡಿಸಿತ್ತು. ಬಿಬಿಎಂಪಿ ಹಾಗೂ ಬೆಂಗಳೂರು ನಗರ ಸಂಚಾರ ಪೊಲೀಸರ ಸಹಯೋಗದಲ್ಲಿ ಸಂಚಾರ ದೀಪಗಳಲ್ಲಿ ಹೃದಯದ ಮಾದರಿ ಮೂಡಿಸುವ ಮೂಲಕವೂ ಜಾಗೃತಿ ಮೂಡಿಸಲಾಯಿತು.
ಕನ್ನಿಂಗ್‌ಹ್ಯಾಮ್ ಹಾಗೂ ನಾಗರಭಾವಿಯಲ್ಲಿನ ಫೋರ್ಟಿಸ್ ಆಸ್ಪತ್ರೆಯು 100 ಮೀಟರ್ ಉದ್ದಕ್ಕೂ ಪೇಪರ್‌ನಿಂದ ಹೃದಯ ಸರಪಳಿ ನಿರ್ಮಿಸಿತ್ತು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹೃದಯ ಸರಪಳಿಯುದ್ದಕ್ಕೂ ನಿಂತು, ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಸ್ಪರ್ಶ್ ಆಸ್ಪತ್ರೆ ವತಿಯಿಂದ ಹಾರ್ಟ್ ಹಾರ್ಮನಿ-ಯೋಗ ಫಾರ್ ಹೆಲ್ತ್ ಎಂಬ ಜಾಗೃತಿ ಕಾರ್ಯಕ್ರಮ ನಡೆಸಿ, ಯೋಗಾಭ್ಯಾಸದ ಮೂಲಕ ಹೃದಯದ ಆರೋಗ್ಯ ಕುರಿತು ಅರಿವು ಮೂಡಿಸಲಾಯಿತು.